ಪಪುವಾ ನ್ಯೂಗಿನಿಯಲ್ಲಿ ಭಾರಿ ಭೂಕಂಪ
ಪಪುವಾ ನ್ಯೂಗಿನಿ: ಉತ್ತರ ಪಪುವಾ ನ್ಯೂಗಿನಿಯಲ್ಲಿ ಭಾನುವಾರ ಮುಂಜಾನೆ 6.9 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ಪ್ರಕಟಿಸಿದೆ.
ಆದರೆ ಇದರಿಂದ ಯಾವುದೇ ಸುನಾಮಿ ಭೀತಿ ಇಲ್ಲ ದಂದು ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸ್ಪಷ್ಟಪಡಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಿಗ್ಗೆ 6.22ಕ್ಕೆ ಸುಮಾರು 35 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ.
ಪಪುವಾ ನ್ಯೂಗಿನಿಯ ಪೂರ್ವ ಸೆಪಿಕ್ ಪ್ರಾಂತ್ಯದ ಸುಮಾರು 25 ಸಾವಿರ ಜನಸಂಖ್ಯೆ ಹೊಂದಿದ ವೇವಾಕ್ ಪಟ್ಟಣದಲ್ಲಿ ಈ ಕಂಪನ ಸಂಭವಿಸಿದೆ ಎಂದು ಜಿಯಲಾಜಿಕಲ್ ಸರ್ವೆ ಹೇಳಿದೆ.
ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಸಾವು ನೋವಿನ ಬಗ್ಗೆ ವಿವರಗಳು ಬಂದಿಲ್ಲ. ಮೊದಲು ಈ ಭೂಕಂಪದ ತೀವ್ರತೆ 7.0 ಎಂದು ಪ್ರಕಟಿಸಲಾಗಿತ್ತು. ಆದರೆ ಆ ಬಳಿಕ ಅದನ್ನು 6.9 ಎಂದು ನಿಖರವಾಗಿ ಹೇಳಲಾಗಿದೆ.
ಆಗ್ನೇಯ ಏಷ್ಯಾದಿಂದ ಆರಂಭವಾಗಿ ಫೆಸಿಫಿಕ್ವರೆಗೆ ಹರಡಿರುವ ಭೂಕಂಪದ ರಿಂಗ್ ಆಫ್ ಫೈರ್ ಪರಿದಿಯಲ್ಲಿರುವ ಪಪುವಾ ನ್ಯೂಗಿನಿಯಲ್ಲಿ ಭೂಕಂಪಗಳು ಸಾಮಾನ್ಯ. ಕಡಿಮೆ ಜನಸಂಖ್ಯೆಯ ಅರಣ್ಯದಟ್ಟಣೆಯ ಪ್ರದೇಶದಲ್ಲಿ ಸಾವು ನೋವಿನ ಸಂಖ್ಯೆ ಕಡಿಮೆಯಾದರೂ, ದೊಡ್ಡ ಪ್ರಮಾಣದ ಭೂಕುಸಿತಗಳಿಗೆ ಭೂಕಂಪ ಕಾರಣವಾಗುತ್ತದೆ.