ಪಾಕಿಸ್ತಾನದಲ್ಲಿ ಪೆಟ್ರೋಲಿಯಂ, ಗ್ಯಾಸ್ ನಿಕ್ಷೇಪ ಪತ್ತೆ: ವರದಿ

Update: 2024-09-07 10:33 GMT

ಸಾಂದರ್ಭಿಕ ಚಿತ್ರ (PTI)

ಇಸ್ಲಾಮಾಬಾದ್: ಪಾಕಿಸ್ತಾನದ ಭೂಪ್ರದೇಶದ ನೀರಿನಲ್ಲಿ ಗಣನೀಯ ಪ್ರಮಾಣದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳು ಪತ್ತೆಯಾಗಿದೆ, ಇದು ದೇಶದ ಭವಿಷ್ಯವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ನೀರಿನಲ್ಲಿ ತೈಲ ಮತ್ತು ಅನಿಲಗಳಿರುವ ಬಗ್ಗೆ ಪರಿಶೀಲಿಸಲು ಸ್ನೇಹಯುತ ರಾಷ್ಟ್ರದ ಸಹಯೋಗದೊಂದಿಗೆ 3 ವರ್ಷಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ʼಡಾನ್ ನ್ಯೂಸ್ ಟಿವಿʼ ಶುಕ್ರವಾರ ಹಿರಿಯ ಭದ್ರತಾ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಡಾನ್ ನ್ಯೂಸ್ ಟಿವಿಯೊಂದಿಗೆ ಮಾತನಾಡಿದ ಪಾಕಿಸ್ತಾನದ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ ಮಾಜಿ ಸದಸ್ಯ ಮೊಹಮ್ಮದ್ ಆರಿಫ್, ತೈಲ ನಿಕ್ಷೇಪ ಇರುವ ಸಾಧ್ಯತೆ ಬಗ್ಗೆ ನಿರೀಕ್ಷೆಯಿದೆ. ಆದರೆ 100 ಪ್ರತಿಶತ ಖಚಿತವಿಲ್ಲ ಎಂದು ಹೇಳಿದ್ದಾರೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಈ ನಿಕ್ಷೇಪಗಳು ಸಾಕಾಗಲಿದೆಯಾ? ಎಂದು ಕೇಳಿದಾಗ, ಇದು ಉತ್ಪಾದನೆಯ ಗಾತ್ರವನ್ನು ಅವಲಂಬಿಸಿರುತ್ತದೆ. ಕೇವಲ ಈ ಬಗ್ಗೆ ಪರಿಶೋಧನೆಗೆ ಸುಮಾರು 5 ಶತಕೋಟಿಯಷ್ಟು ಭಾರಿ ಹೂಡಿಕೆಯ ಅಗತ್ಯವಿದೆ ಮತ್ತು ಈ ಪ್ರಕ್ರಿಯೆಗೆ ನಾಲ್ಕರಿಂದ ಐದು ವರ್ಷಗಳ ಅವಧಿ ಬೇಕಾಗಬಹುದು ಎಂದು ಹೇಳಿದ್ದಾರೆ.

ಈ ಬೆಳವಣಿಗೆಯನ್ನು 'ಬ್ಲೂ ವಾಟರ್ ಎಕಾನಮೆ' ಎಂದು ಕರೆಯುವ ಮೂಲಕ ಲಾಭ ಪಡೆಯುವ ಪ್ರಯತ್ನ ಎಂದು ಹೇಳಿರುವ ಅಧಿಕಾರಿ, ಬಿಡ್ಡಿಂಗ್ ಮತ್ತು ಅನ್ವೇಷಣೆಯ ಪ್ರಸ್ತಾಪಗಳನ್ನು ಅಧ್ಯಯನ ಮಾಡಲಾಗುತ್ತಿದೆ, ಅಂದರೆ ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೋಧನಾ ಕಾರ್ಯವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ಬಾವಿಗಳನ್ನು ಅಗೆಯುವ ಮತ್ತು ತೈಲವನ್ನು ಹೊರತೆಗೆಯುವ ಕೆಲಸವು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುತ್ತದೆ. ಕೆಲವು ಬಾರಿ ತೈಲ ಮತ್ತು ಅನಿಲಕ್ಕಿಂತ ಹೆಚ್ಚಿನದು ಎಂದರೆ ಖನಿಜಗಳು ಕೂಡ ಸಿಗಬಹುದು. ಈ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸುವುದು ದೇಶದ ಆರ್ಥಿಕ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ, ವೆನೆಜುವೆಲಾ ಸುಮಾರು 3.4 ಬಿಲಿಯನ್ ಬ್ಯಾರೆಲ್ಗಳೊಂದಿಗೆ ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಸೌದಿ ಅರೇಬಿಯಾ, ಇರಾನ್, ಕೆನಡಾ ಮತ್ತು ಇರಾಕ್ ಉಳಿದ ಮೊದಲ ಐದು ಸ್ಥಾನಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News