ಮಾಸ್ಕೋ ನಗರದ ಮೇಲೆ ಉಕ್ರೇನ್ ನಿಂದ 25ಕ್ಕೂ ಅಧಿಕ ಡ್ರೋನ್ ದಾಳಿ
ಮಾಸ್ಕೋ : ರಶ್ಯ ರಾಜಧಾನಿ ಮಾಸ್ಕೊವನ್ನು ಗುರಿಯಿರಿಸಿ ಉಕ್ರೇನ್ ಸೇನೆಯು ರವಿವಾರ ಕನಿಷ್ಠ 25 ಡ್ರೋನ್ ದಾಳಿಗಳನ್ನು ನಡೆಸಿದೆ. ಸಂಘರ್ಷ ಆರಂಭಗೊಂಡಾಗಿನಿಂದ ಮಾಸ್ಕೊ ನಗರದ ಮೇಲೆ ಉಕ್ರೇನ್ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ.
ರಶ್ಯ ರಾಜಧಾನಿ ಮೇಲೆ ಡ್ರೋನ್ ಆಕ್ರಮಣ ನಡೆದಿರುವುದನ್ನು ಮಾಸ್ಕೋ ಮೇಯರ್ ಸೆರ್ಗೆಯಿ ದೃಢಪಡಿಸಿದ್ದಾರೆ ಮತ್ತು ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದವರು ಹೇಳಿದ್ದಾರೆ.
ಕಪ್ಪು ಸಮುದ್ರ ತೀರ ಪ್ರದೇಶವಾದ ಸೋಚಿಯಲ್ಲಿ ರಶ್ಯದ ಆತಿಥ್ಯದಲ್ಲಿ 50 ಆಫ್ರಿಕನ್ ರಾಷ್ಟ್ರಗಳ ಸಚಿವರ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲೇ ಈ ಡ್ರೋನ್ ದಾಳಿಗಳು ನಡೆದಿವೆ. ಆದರೆ ದಾಳಿಯಲ್ಲಿ ಯಾವುದೇ ಸಾವು, ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ ಯಾವುದೇ ಕಟ್ಟಡಗಳಿಗೆ ಹಾನಿಯಾಗಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
ಡ್ರೋನ್ ದಾಳಿಯ ಆನಂತರ ಮಾಸ್ಕೊದ ಡೊಮೊಡೆಡೊವೊ ಹಾಗೂ ಝುಲ್ಕೊವ್‌ಸ್ಕಿ ವಿಮಾನನಿಲ್ದಾಣಗಳ ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.