ಮ್ಯಾನ್ಮಾರ್: ಆಂಗ್ ಸಾನ್ ಸೂಕಿಯನ್ನು ಭೇಟಿಯಾದ ಥೈಲ್ಯಾಂಡ್ ಸಚಿವ

Update: 2023-07-12 17:47 GMT

ಯಾಂಗೊನ್(Yangon): ಸುಮಾರು ಎರಡು ವರ್ಷಕ್ಕೂ ಅಧಿಕ ಸಮಯದಿಂದ ಬಂಧನದಲ್ಲಿರುವ ಮ್ಯಾನ್ಮಾರ್ನ ನಾಯಕಿ ಆಂಗ್ಸಾನ್ ಸೂಕಿಯನ್ನು ಕಳೆದ ವಾರ ಭೇಟಿಯಾಗಿದ್ದು ಅವರು ಆರೋಗ್ಯದಿಂದಿದ್ದಾರೆ ಎಂದು ಥೈಲ್ಯಾಂಡ್ ನ ವಿದೇಶಾಂಗ ಸಚಿವ ಡಾನ್ ಪ್ರಮುದ್ವಿನಯ್ ಹೇಳಿದ್ದಾರೆ.

2021ರ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಮುಖಂಡರೊಬ್ಬರು ಸೂಕಿಯನ್ನು ಭೇಟಿಯಾಗಲು ಅವಕಾಶ ದೊರಕಿದ್ದು ಸೂಕಿ ಜತೆ ಥೈಲ್ಯಾಂಡ್ ಸಚಿವರು ಸುಮಾರು 1 ಗಂಟೆ ಮಾತುಕತೆ ನಡೆಸಿದ್ದಾರೆ. ದೇಶದಲ್ಲಿ ಈಗಿರುವ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ಮುಂದುವರಿಸುವಂತೆ ಸೂಕಿ ಒತ್ತಾಯಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

ಮ್ಯಾನ್ಮಾರ್ ನಲ್ಲಿ 2020ರ ನವೆಂಬರ್ ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್ಎಲ್ಡಿ) ಗೆಲುವು ಸಾಧಿಸಿ ಸರಕಾರ ರಚಿಸಿತ್ತು. ಆದರೆ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಸೇನೆ 2021ರ ಫೆಬ್ರವರಿಯಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಎನ್ಎಲ್ಡಿ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಕ್ಕೆ ಪಡೆದಿದೆ.

ಸೇನಾಡಳಿತವನ್ನು ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕಿದ ಸೇನಾಡಳಿತ, ವಿರೋಧ ಪಕ್ಷಗಳ ಪ್ರಮುಖ ಮುಖಂಡರನ್ನು ಜೈಲಿಗಟ್ಟಿದೆ. ಎನ್ಎಲ್ಡಿ ನಾಯಕಿ ಆಂಗ್ಸಾನ್ ಸೂಕಿ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ಒಟ್ಟು 33 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದು ಕಳೆದ ವರ್ಷದ ಜೂನ್ವರೆಗೆ ಗೃಹಬಂಧನದಲ್ಲಿದ್ದರು. ಇದೀಗ ರಾಜಧಾನಿ ನೇಪಿಡಾವ್ನ ಜೈಲಿನಲ್ಲಿ ಏಕಾಂಗಿ ಬಂಧನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News