ಉಕ್ರೇನ್ ಶಾಂತಿ ಮಾತುಕತೆ | ಭಾರತ ಸಹಿತ 7 ದೇಶಗಳಿಂದ ಜಂಟಿ ಹೇಳಿಕೆಗೆ ಸಹಿ ಹಾಕದಿರಲು ನಿರ್ಧಾರ

Update: 2024-06-16 16:54 GMT

ಸಾಂದರ್ಭಿಕ ಚಿತ್ರ | PC : ANI

ಜಿನೆವಾ: ರಶ್ಯದ ಗೈರುಹಾಜರಿಯಲ್ಲಿ ಸ್ವಿಝರ್‍ಲ್ಯಾಂಡ್‍ನಲ್ಲಿ ನಡೆದ ಉಕ್ರೇನ್ ಶಾಂತಿ ಸಮಾವೇಶದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಗೆ ಭಾರತ ಹಾಗೂ ಇತರ 6 ದೇಶಗಳು ಸಹಿ ಹಾಕದಿರಲು ನಿರ್ಧರಿಸಿವೆ. ಸಂಬಂಧಿಸಿದ ಎಲ್ಲಾ ಕಡೆಯವರನ್ನೂ ಒಗ್ಗೂಡಿಸಿದರೆ ಮಾತ್ರ ಶಾಂತಿ ಸಾಧ್ಯ ಎಂದು ಈ ದೇಶಗಳು ಹೇಳಿವೆ.

ಸುಮಾರು 80 ದೇಶಗಳು ಸಮಾವೇಶದಲ್ಲಿ ಪಾಲ್ಗೊಂಡಿವೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ (ಪಶ್ಚಿಮ) ಪವನ್ ಕಪೂರ್ ಭಾರತವನ್ನು ಪ್ರತಿನಿಧಿಸಿದ್ದರು. `ಶಾಂತಿ ಸಾಧ್ಯವಾಗಬೇಕಿದ್ದರೆ ಎಲ್ಲಾ ಕಡೆಯವರನ್ನೂ ಜತೆಗೂಡಿಸಬೇಕು ಮತ್ತು ಸಂಘರ್ಷದ ಎರಡು ಪಕ್ಷಗಳ ನಡುವೆ ಪ್ರಾಮಾಣಿಕ ಮತ್ತು ವ್ಯಾವಹಾರಿಕ ಮಾತುಕತೆಯ ಅಗತ್ಯವಿದೆ ಎಂಬುದು ನಮ್ಮ ನಿಲುವಾಗಿದೆ. ಎರಡೂ ಕಡೆಯವರಿಗೆ ಸಮ್ಮತಿಯಾಗುವ ಆಯ್ಕೆ ಮಾತ್ರ ಶಾಶ್ವತ ಶಾಂತಿ ಸ್ಥಾಪನೆಗೆ ಪೂರಕವಾಗಬಹುದು' ಎಂದು ಪವನ್ ಕಪೂರ್ ಸಭೆಯಲ್ಲಿ ಹೇಳಿದರು. ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಯುಎಇ, ಬ್ರೆಝಿಲ್ ಸೇರಿದಂತೆ ಇತರ 6 ದೇಶಗಳು ಹೇಳಿಕೆಗೆ ಸಹಿ ಹಾಕಲಿಲ್ಲ. ರಶ್ಯದ ಮಿತ್ರದೇಶ ಚೀನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿಲ್ಲ.

ಸಮಾವೇಶದಲ್ಲಿ ಹೊರಡಿಸಲಾದ ಜಂಟಿ ನಿರ್ಣಯ ಶಾಂತಿಯ ಕಡೆಗಿನ ಪ್ರಥಮ ಹೆಜ್ಜೆಯೆಂದು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಶ್ಲಾಘಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News