ನೆತನ್ಯಾಹು ನಿಷ್ಠುರ ನಿಲುವು ಗಾಝಾ ಒಪ್ಪಂದಕ್ಕೆ ಪೂರಕವಲ್ಲ : ಅಮೆರಿಕದ ನಿಯೋಗ ಟೀಕೆ
ದೋಹ : ಗಾಝಾ- ಈಜಿಪ್ಟ್ ಗಡಿಭಾಗದ ನಿಯಂತ್ರಣ ಉಳಿಸಿಕೊಳ್ಳುವ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರ ಹೇಳಿಕೆಗಳು ಗಾಝಾ ಒಪ್ಪಂದ ಏರ್ಪಡಲು ನೆರವಾಗುವುದಿಲ್ಲ ಎಂದು ಅಮೆರಿಕದ ನಿಯೋಗ ಟೀಕಿಸಿದೆ.
ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಕೈಗೊಂಡ ಮಧ್ಯಪ್ರಾಚ್ಯ ಪ್ರವಾಸದ ಸಂದರ್ಭ ಅವರ ಜತೆಗಿದ್ದ ನಿಯೋಗದ ಅಧಿಕಾರಿ ಇಸ್ರೇಲ್ ಪ್ರಧಾನಿಯ ನಿಷ್ಠುರ ಮತ್ತು ರಾಜಿಯಾಗದ ನಿಲುವನ್ನು ಟೀಕಿಸಿದ್ದಾರೆ.
ಹಮಾಸ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬದ ಜತೆಗಿನ ಮಾತುಕತೆಯ ಸಂದರ್ಭ ನೆತನ್ಯಾಹು `ಗಾಝಾ ಮತ್ತು ಈಜಿಪ್ಟ್ ನಡುವಿನ ಫಿಲಾಡೆಲ್ಫಿ ಕಾರಿಡಾರ್‍ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಇಸ್ರೇಲ್ ಪಟ್ಟುಹಿಡಿಯುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿತ್ತು.
ಈ ಬಗ್ಗೆ ಅಸಮಾಧಾನ ಸೂಚಿಸಿರುವ ಅಮೆರಿಕದ ನಿಯೋಗ `ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಗಮನಿಸಿದ್ದು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಇಂತಹ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಮಾತುಕತೆ ಸಂದರ್ಭ ಬಗೆಹರಿಸಬೇಕು ' ಎಂದಿದೆ.
ಅಮೆರಿಕ ಮತ್ತು ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಎದುರುಗಿರುವ ಏಕೈಕ ಗುರಿಯೆಂದರೆ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸುವುದು. ಕೆಲವು ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚುವರಿ ಮಾತುಕತೆ ನಡೆಯಲಿದೆ. ಆದರೆ ಈ ರೀತಿ ಮಾಧ್ಯಮದ ಎದುರು ನೀಡುವ ಹೇಳಿಕೆ ಖಂಡಿತಾ ಒಪ್ಪಂದ ಪ್ರಕ್ರಿಯೆಗೆ ಪೂರಕವಾಗಿಲ್ಲ ಎಂದು ನಿಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ, ಇಸ್ರೇಲ್ ಗಾಝಾದಿಂದ ತನ್ನ ಸೈನ್ಯವನ್ನು ಹಿಂದೆಗೆದುಕೊಳ್ಳುವ ವೇಳಾಪಟ್ಟಿ ಮತ್ತು ಸ್ಥಳವನ್ನು ಇಸ್ರೇಲ್ ಈಗಾಗಲೇ ಒಪ್ಪಿಕೊಂಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿದ್ದಾರೆ. ಸಂಘರ್ಷ ಆರಂಭವಾದಂದಿನಿಂದಲೂ ಗಾಝಾದ ಮೇಲೆ ಇಸ್ರೇಲ್‍ನ ದೀರ್ಘಾವಧಿಯ ಆಕ್ರಮಣವನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕದನ ವಿರಾಮ ಒಪ್ಪಂದದ ಬಗ್ಗೆ ಭಿನ್ನಮತ ಇದೆ. ಆದರೆ ಎರಡೂ ಕಡೆಯವರು ಗರಿಷ್ಟ ಹೊಂದಾಣಿಕೆ ಪ್ರದರ್ಶಿಸಿದರೆ ಒಪ್ಪಂದ ಸಾಧ್ಯವಾಗಲಿದೆ. ಸಮಯ ಅತ್ಯಂತ ಮಹತ್ವದ್ದಾಗಿದೆ. ಪ್ರತೀ ದಿನ ಕಳೆದಂತೆ ಒಳ್ಳೆಯ ಜನರಿಗೆ ಇನ್ನಷ್ಟು ಕೆಟ್ಟ ವಿಷಯಗಳು ಸಂಭವಿಸಬಹುದು ಎಂದವರು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ನಡುವೆ ಕಳೆದ ಸುಮಾರು 10 ತಿಂಗಳಿಂದ ಮುಂದುವರಿದಿರುವ ಗಾಝಾ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದಕ್ಕಾಗಿ ಮಧ್ಯಪ್ರಾಚ್ಯಕ್ಕೆ 9ನೇ ರಾಜತಾಂತ್ರಿಕ ಪ್ರವಾಸವನ್ನು ಮುಗಿಸಿ ಸ್ವದೇಶಕ್ಕೆ ವಾಪಸಾದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಖತರ್, ಈಜಿಪ್ಟ್ ಮತ್ತು ಇಸ್ರೇಲ್‍ಗೆ ಭೇಟಿ ನೀಡಿ ಮುಖಂಡರ ಜತೆ ಸಭೆ ನಡೆಸಿದ್ದ ಅವರು `ಅಮೆರಿಕ ಮುಂದಿರಿಸಿದ ಹೊಸ ಪ್ರಸ್ತಾಪ ಬಹುಷಃ ವಿಶಾಲವಾದ ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸಲು ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಕೆ ನೀಡಿದ್ದರು.
ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಮುಂದುವರಿದಂತೆ ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಸಾಧ್ಯವಾಗಿಸಲು ಅಮೆರಿಕ ನಡೆಸಿದ ಪ್ರಯತ್ನ ಕೈಗೂಡುವ ಸಾಧ್ಯತೆಯೂ ಕನಿಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಕದನ ವಿರಾಮವನ್ನು ತಲುಪಲು ತಾನು ಉತ್ಸುಕನಾಗಿದ್ದೇನೆ. ಆದರೆ ಅಮೆರಿಕದ ಪ್ರಸ್ತಾಪಕ್ಕೆ ಇಸ್ರೇಲ್‍ನ ಹೊಸ ಷರತ್ತುಗಳಿಗೆ ತನ್ನ ವಿರೋಧವಿದೆ ಎಂದು ಹಮಾಸ್ ಹೇಳಿದೆ.