ಬ್ರಿಟನ್‍ನ ನೂತನ ಪ್ರಧಾನಿಯಿಂದ ಸಂಪುಟ ರಚನೆ; ಮೊದಲ ಮಹಿಳಾ ಚಾನ್ಸ್ ಲರ್ ನಿಯೋಜನೆ

Update: 2024-07-06 09:05 GMT

ರಚೆಲ್ ರೀವ್ಸ್ (Photo:X/@RachelReevesMP)

ಲಂಡನ್: ಐತಿಹಾಸಿಕ ನಡೆಯೊಂದರಲ್ಲಿ ಬ್ರಿಟನ್‍ನ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ದೇಶದ ಖಜಾನೆಯ ಮೊದಲ ಮಹಿಳಾ ಚಾನ್ಸ್ ಲರ್ ಆಗಿ ರಚೆಲ್ ರೀವ್ಸ್ ಅವರನ್ನು ನೇಮಕ ಮಾಡಿದ್ದಾರೆ. ಅಂಜೆಲಾ ರೇನರ್ ಅವರನ್ನು ಉಪಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ. ಹೊಸ ಸಂಪುಟ ಶುಕ್ರವಾರ ಅಸ್ತಿತ್ವಕ್ಕೆ ಬಂದಿದೆ.

25 ಮಂದಿಯ ಸಂಪುಟದಲ್ಲಿ ದಾಖಲೆ ಸಂಖ್ಯೆಯ ಅಂದರೆ 11 ಮಂದಿ ಮಹಿಳೆಯರು ಸೇರಿದ್ದಾರೆ. ಯೆವೆತ್ತಿ ಕೂಪರ್ ಅವರನ್ನು ಗೃಹ ಕಾರ್ಯದರ್ಶಿಯಾಗಿ, ಡೇವಿಡ್ ಲ್ಯಾಮಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ಹಾಗೂ ಜಾನ್ ಹೆಲೆ ಅವರನ್ನು ರಕ್ಷಣಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಇತರ ಪ್ರಮುಖರಲ್ಲಿ ಶಹಬಾನಾ ಮೊಹ್ಮದ್ (ನ್ಯಾಯಾಂಗ ಕಾರ್ಯದರ್ಶಿ), ವೆಸ್ ಸ್ಟೀಟಿಂಗ್ (ಆರೋಗ್ಯ ಕಾರ್ಯದರ್ಶಿ), ಬ್ರಿಜೆಟ್ ಫಿಲಿಪ್ಸನ್ (ಶಿಕ್ಷಣ ಕಾರ್ಯದರ್ಶಿ) ಮತ್ತು ಈದ್ ಮಿಲಿಬಂದ್ (ಇಂಧನ ಕಾರ್ಯದರ್ಶಿ) ಸೇರಿದ್ದಾರೆ.

ಡೌನಿಂಗ್ ಸ್ಟ್ರೀಟ್‍ನಲ್ಲಿ ಮಾಡಿದ ತಮ್ಮ ಉದ್ಘಾಟನಾ ಭಾಷಣದಲ್ಲಿ ಕೀರ್‌ ಸ್ಟಾರ್ಮರ್‌ ದೇಶದ ಆರೋಗ್ಯ ವ್ಯವಸ್ಥೆಯ ಸಂಕಷ್ಟಗಳನ್ನು ನಿವಾರಿಸುವ ಭರವಸೆ ನೀಡಿದ್ದರು. ಶಾಲೆ ಹಾಗೂ ಕೈಗೆಟುಕುವ ದರದ ಮನೆಗಳನ್ನು ಒದಗಿಸುವ ಆಶ್ವಾಸನೆ ನೀಡಿದ್ದರು. ಬದಲಾವಣೆಗಾಗಿ ಮತ್ತು ಸಾರ್ವಜನಿಕ ಸೇವಾ ರಾಜಕೀಯಕ್ಕಾಗಿ ಲೇಬರ್ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ ಎಂದು ಅವರು ವಿಶ್ಲೇಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News