ಉತ್ತರ ಕೊರಿಯಾ ಕುರಿತ ವಿಶ್ವಸಂಸ್ಥೆ ನಿಲುವು ಬದಲಾಗಬೇಕು: ರಶ್ಯ ಆಗ್ರಹ

Update: 2024-03-29 17:20 GMT

ಕಿಮ್ ಜಾಂಗ್ ಉನ್, ವ್ಲಾದಿಮರ್ ಪುಟಿನ್ | Photo: NDTV

ಮಾಸ್ಕೋ: ವಿಶ್ವಸಂಸ್ಥೆಯ ನಿರ್ಬಂಧ ಜಾರಿಯ ಮೇಲುಸ್ತುವಾರಿ ವಹಿಸುವ ತಜ್ಞರ ಸಮಿತಿಯ ನವೀಕರಣವನ್ನು ರಶ್ಯ ವೀಟೊ ಬಳಸಿ ತಡೆಹಿಡಿದಿದ್ದು, ಉತ್ತರ ಕೊರಿಯಾಕ್ಕೆ ಸಂಬಂಧಿಸಿ ತನ್ನ ಹಳೆಯ ನಿಲುವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದಿದೆ.

ಅಮೆರಿಕ ಮತ್ತದರ ಮಿತ್ರರು ಏಶ್ಯಾದಲ್ಲಿ ಮಿಲಿಟರಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದ್ದು ಉತ್ತರ ಕೊರಿಯಾವನ್ನು ಜಾಗತಿಕ ವೇದಿಕೆಯಲ್ಲಿ ಒಬ್ಬಂಟಿಯಾಗಿಸಿ ಅದರ ಕತ್ತುಹಿಸುಕಲು ಪ್ರಯತ್ನಿಸುತ್ತಿದ್ದಾರೆ ಎಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ಹೇಳಿದ್ದಾರೆ.

ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ವಿಶ್ವಸಂಸ್ಥೆಯ ನಿರ್ಬಂಧಗಳ ಮೇಲುಸ್ತುವಾರಿ ವಹಿಸುವ ತಜ್ಞರ ಸಮಿತಿಯನ್ನು ನವೀಕರಿಸುವುದನ್ನು ರಶ್ಯ ತಡೆಹಿಡಿದಿದೆ. ರಶ್ಯದ ಈ ಕ್ರಮವು 2006ರಲ್ಲಿ ಉತ್ತರ ಕೊರಿಯಾ ತನ್ನ ಪ್ರಥಮ ಪರಮಾಣು ಪರೀಕ್ಷೆ ನಡೆಸಿದ ಬಳಿಕ ವಿಧಿಸಲಾದ ಅಸಂಖ್ಯಾತ ವಿಶ್ವಸಂಸ್ಥೆ ನಿರ್ಬಂಧಗಳ ಜಾರಿಗೆ ತೊಡಕಾಗಲಿದೆ ಮತ್ತು ಉಕ್ರೇನ್ ಯುದ್ಧದ ಮಧ್ಯೆ ರಶ್ಯಕ್ಕೆ ಹತ್ತಿರವಾಗುವುದರ ಮೂಲಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ ಜಾಂಗ್‍ಗೆ ಆಗಿರುವ ಪ್ರಯೋಜನಕ್ಕೆ ನಿದರ್ಶನವಾಗಿದೆ.

ಅಂತರಾಷ್ಟ್ರೀಯ ನಿರ್ಬಂಧವು ಕೊರಿಯಾ ಪರ್ಯಾಯ ದ್ವೀಪದಲ್ಲಿ ಭದ್ರತೆಯ ಪರಿಸ್ಥಿತಿಯನ್ನು ಸುಧಾರಿಸಿಲ್ಲ ಮತ್ತು ನಿರ್ಬಂಧವು ಉತ್ತರ ಕೊರಿಯಾ ಜನಸಮುದಾಯದ ಮೇಲೆ ತೀವ್ರ ಮಾನವೀಯ ಪರಿಣಾಮಗಳಿಗೆ ಕಾರಣವಾಗಿದೆ. ಆದ್ದರಿಂದ ಕೊರಿಯಾ ದ್ವೀಪಕ್ಕೆ ಸಂಬಂಧಿಸಿದ ತನ್ನ ನಿಲುವಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಾರ್ಪಾಡು ಮಾಡಿಕೊಳ್ಳಬೇಕಿದೆ. ಲಭ್ಯ ಅವಕಾಶವನ್ನು ಬಳಸಿಕೊಂಡು ಉತ್ತರ ಕೊರಿಯಾವನ್ನು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸಿ ಅದರ ಕತ್ತು ಹಿಸುಕುವುದಷ್ಟೇ ಅಮೆರಿಕ ಮತ್ತದರ ಮಿತ್ರರ ಹಿತಾಸಕ್ತಿಯಾಗಿದೆ. ಕೊರಿಯಾ ಸಮಸ್ಯೆಗೆ ಶಾಂತಿಯುತ ಪರಿಹಾರ ಹುಡುಕಲು ಅವರು ಆಸಕ್ತಿ ಹೊಂದಿಲ್ಲ ಎಂದು ಮರಿಯಾ ಝಕರೋವಾ ಪ್ರತಿಪಾದಿಸಿದ್ದಾರೆ.

1948ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಬೆಂಬಲದೊಂದಿಗೆ ರಚನೆಯಾದ ಉತ್ತರ ಕೊರಿಯಾದ ಆಡಳಿತದ ವಿರುದ್ಧ ಅಂತರಾಷ್ಟ್ರೀಯ ನಿರ್ಬಂಧ ಹೇರಲಾಗಿದೆ. ಈಗ ಉತ್ತರ ಕೊರಿಯಾಕ್ಕೆ ರಶ್ಯ, ದಕ್ಷಿಣ ಕೊರಿಯಾಕ್ಕೆ ಅಮೆರಿಕ ಬೆಂಬಲ ಮುಂದುವರಿದಿದೆ.

ವಿಶ್ವಸಂಸ್ಥೆ ನಿರ್ಬಂಧಗಳ ಮೇಲುಸ್ತಾರಿ ಸಮಿತಿಯು ವಸ್ತುನಿಷ್ಟತೆ ಮತ್ತು ನಿಷ್ಪಕ್ಷಪಾತದ ಎಲ್ಲಾ ಮಾನದಂಡಗಳನ್ನೂ ಕಳೆದುಕೊಂಡಿದೆ. ತಜ್ಞರು ವಸ್ತುನಿಷ್ಟವಾಗಿ ಅಥವಾ ನಿಷ್ಪಕ್ಷಪಾತವಾಗಿ ಕೆಲಸ ಮಾಡದೆ ಪಾಶ್ಚಿಮಾತ್ಯರ ಸಾಧನವಾಗಿ ಬದಲಾಗಿದ್ದಾರೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ದೇಶಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿರುವ ಅಮೆರಿಕ ಮತ್ತದರ ಮಿತ್ರದೇಶಗಳ ಕೈಗೊಂಬೆಯಾಗಿರುವ ಸಮಿತಿಯನ್ನು ನವೀಕರಿಸುವುದರಲ್ಲಿ ಅರ್ಥವಿಲ್ಲ ಎಂದು ರಶ್ಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News