ಗಾಝಾ ಯುದ್ಧ ಸಂಪೂರ್ಣ ಅಂತ್ಯಗೊಳಿಸದ ಒಪ್ಪಂದ ಸ್ವೀಕಾರಾರ್ಹವಲ್ಲ: ಹಮಾಸ್
ಗಾಝಾ : ಯುದ್ಧವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವ ಒಪ್ಪಂದವನ್ನು ಮಾತ್ರ ಒಪ್ಪಿಕೊಳ್ಳುವುದಾಗಿ ಹಮಾಸ್‍ನ ಉನ್ನತ ಮುಖಂಡರು ಸ್ಪಷ್ಟಪಡಿಸಿದ್ದು, ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೈಯಕ್ತಿಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ.
40 ದಿನಗಳ ಕದನವಿರಾಮ ಮತ್ತು ಈ ಅವಧಿಯಲ್ಲಿ ಒತ್ತೆಯಾಳುಗಳ ಮತ್ತು ಫೆಲೆಸ್ತೀನ್ ಕೈದಿಗಳ ವಿನಿಮಯಕ್ಕೆ ಅವಕಾಶ ನೀಡುವ ಒಪ್ಪಂದದ ಬಗ್ಗೆ ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್ ನ ರಾಜಧಾನಿ ಕೈರೋದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಶನಿವಾರ ಹಮಾಸ್ ನಿಯೋಗ ಪಾಲ್ಗೊಂಡಿತ್ತು.
ಗಾಝಾದಲ್ಲಿ ಯುದ್ಧವನ್ನು ಸಂಪೂರ್ಣ ಅಂತ್ಯಗೊಳಿಸದ ಒಪ್ಪಂದವನ್ನು ಯಾವುದೇ ಸಂದರ್ಭದಲ್ಲೂ ಸ್ವೀಕರಿಸುವುದಿಲ್ಲ. ಗಾಝಾ ಆಕ್ರಮಣವನ್ನು ಅಂತ್ಯಗೊಳಿಸದೆ ಒತ್ತೆಯಾಳು ಬಿಡುಗಡೆಯ ಪ್ರಸ್ತಾವನೆಯನ್ನು ಇಸ್ರೇಲ್ ನೀಡಿರುವುದು ಖಂಡನೀಯವಾಗಿದೆ. ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಕದನ ವಿರಾಮ ಒಪ್ಪಂದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಈ ಸಂದರ್ಭ ಹಮಾಸ್ ನಿಯೋಗ ಹೇಳಿದೆ. ಇಸ್ರೇಲ್ ತನ್ನ ನಿಯೋಗವನ್ನು ಕೈರೋಗೆ ಇನ್ನೂ ಕಳುಹಿಸಿಲ್ಲ. ಹಮಾಸ್‍ನ ಪ್ರತಿಕ್ರಿಯೆಯನ್ನು ಗಮನಿಸಿ, ಸಕಾರಾತ್ಮಕ ಪ್ರಗತಿಯ ಲಕ್ಷಣ ಕಂಡುಬಂದರೆ ಮಾತ್ರ ನಿಯೋಗವನ್ನು ರವಾನಿಸುವುದಾಗಿ ಇಸ್ರೇಲ್ ಹೇಳಿದೆ.
ಹಮಾಸ್‍ನ ನಿಲುವನ್ನು ಅಮೆರಿಕ ಟೀಕಿಸಿದೆ. `ಯುದ್ಧವಿರಾಮ ಮತ್ತು ಗಾಝಾ ಜನರ ನಡುವೆ ನಿಂತಿರುವ ಹಮಾಸ್‍ಗೆ, ಇಸ್ರೇಲ್ ಜತೆ ಕದನವಿರಾಮ ಒಪ್ಪಂದವನ್ನು ಸ್ವೀಕರಿಸುವುದು ಜಾಣ ಆಯ್ಕೆಯಾಗಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಹೇಳಿದ್ದಾರೆ.
ರಫಾದ ಮೇಲೆ ಆಕ್ರಮಣದ ಸಾಧ್ಯತೆಯು ಅಂತರಾಷ್ಟ್ರೀಯ ಕಳವಳವನ್ನು ಹೆಚ್ಚಿಸಿದೆ. ಆಕ್ರಮಣಶೀಲತೆಯನ್ನು ನಿಲ್ಲಿಸುವ ಬದಲು ರಫಾವನ್ನು ಪ್ರವೇಶಿಸಲು ಮುಂದಾಗಿರುವುದಕ್ಕೆ ಪೂರ್ಣ ಹೊಣೆಯನ್ನು ಇಸ್ರೇಲ್ ಹೊರಬೇಕು ಎಂದು ಹಮಾಸ್ ಮುಖಂಡರು ಹೇಳಿದ್ದಾರೆ. ಗಾಝಾ ಪಟ್ಟಿಯ ಜನಸಂಖ್ಯೆಯ ಅರ್ಧದಷ್ಟು, ಅಂದರೆ ಸುಮಾರು 1.2 ದಶಲಕ್ಷ ಜನತೆ ರಫಾದಲ್ಲಿ ಆಶ್ರಯ ಪಡೆದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರಫಾದ ಮೇಲಿನ ಆಕ್ರಮಣವು ಮಾನವೀಯ ನೆರವು ಒದಗಿಸಲು ಹೆಣಗುತ್ತಿರುವ ನೆರವು ಏಜೆನ್ಸಿಗಳಿಗೆ ವಿನಾಶಕಾರಿ ಹೊಡೆತ ನೀಡಲಿದೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ಏಜೆನ್ಸಿಯ ವಕ್ತಾರ ಜೆನ್ಸ್ ಲೆಯಾರ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.