ʼಪ್ರೆಸಿಡೆಂಟ್ ಟ್ರಂಪ್ʼ | ಜಾಗತಿಕ ನಾಯಕರ ಪ್ರತಿಕ್ರಿಯೆ
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಹಿನ್ನೆಲೆಯಲ್ಲಿ ಜಾಗತಿಕ ನಾಯಕರ ಪ್ರತಿಕ್ರಿಯೆ ಹೀಗಿದೆ.
ಅಮೆರಿಕದ ಜತೆ ಶಾಂತಿಯುತ ಸಹಬಾಳ್ವೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಹೇಳಿದ್ದಾರೆ.
ಅಮೆರಿಕ ಸ್ನೇಹಪರವಲ್ಲದ ದೇಶವಾಗಿದ್ದು ಡೊನಾಲ್ಡ್ ಟ್ರಂಪ್ ಅವರ ಕಾರ್ಯಗಳನ್ನು ನೋಡಿ ರಶ್ಯ ನಿರ್ಣಯಿಸುತ್ತದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ಅಧ್ಯಕ್ಷಾವಧಿಯಲ್ಲಿ ಭಾರತ- ಅಮೆರಿಕ ಸಂಬಂಧಗಳು ಹೊಸ ಎತ್ತರಕ್ಕೆ ತಲುಪುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ವೇತಭವನಕ್ಕೆ ಟ್ರಂಪ್ ಅವರ ಐತಿಹಾಸಿಕ ಮರಳುವಿಕೆಯು ಅಮೆರಿಕಕ್ಕೆ ಹೊಸ ಆರಂಭವನ್ನು ನೀಡುತ್ತದೆ ಮತ್ತು ಇಸ್ರೇಲ್-ಅಮೆರಿಕದ ನಡುವಿನ ಮಹಾನ್ ಮೈತ್ರಿಗೆ ಪ್ರಬಲ ಮರುಬದ್ಧತೆಯನ್ನು ನೀಡುತ್ತದೆ ಎಂದು ʼಅಮೆರಿಕದ ಆಪ್ತʼ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ಅವರ ನಿರ್ಣಾಯಕ ನಾಯಕತ್ವದ ಅಡಿಯಲ್ಲಿ ಬಲಿಷ್ಟ ಅಮೆರಿಕದ ಯುಗವನ್ನು ನಾವು ಎದುರು ನೋಡುತ್ತಿದ್ದೇವೆ. ಜತೆಗೆ, ಉಕ್ರೇನ್‍ಗೆ ಅಮೆರಿಕದ ಬಲವಾದ ಬೆಂಬಲ ಮುಂದುವರಿಯುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮರ್ ಝೆಲೆನ್‍ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಹೊಸ ಆಡಳಿತದಡಿ ಬ್ರಿಟನ್-ಅಮೆರಿಕ ನಡುವಿನ ವಿಶೇಷ ಸಂಬಂಧ ಮತ್ತಷ್ಟು ಏಳಿಗೆಯಾಗುವ ವಿಶ್ವಾಸವಿದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿದ್ದಾರೆ.
ಅಭಿವೃದ್ಧಿ ಮತ್ತು ಸ್ವಾತಂತ್ರ್ಯಕ್ಕಾಗಿ ಟ್ರಂಪ್ ಜತೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್ ತಿಳಿಸಿದ್ದಾರೆ.
ಹೆಚ್ಚಿನ ಶಾಂತಿ ಮತ್ತು ಸಮೃದ್ಧಿಗಾಗಿ ಅಮೆರಿಕ ಜತೆ ನಿಕಟ ಬಾಂಧವ್ಯ ಮುಂದುವರಿಯಲಿದೆ ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾಗಿ ಕೆಲಸ ಮಾಡುವುದರಿಂದ ನಮ್ಮ ರಾಷ್ಟ್ರಗಳು ಮತ್ತು ಜನರ ನಡುವಿನ ಪಾಲುದಾರಿಕೆಯು ಭವಿಷ್ಯದಲ್ಲಿ ಬಲವಾಗಿರುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಆಲ್ಬಾನೀಸ್ ಹೇಳಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡೆರ್ ಲಿಯೆನ್, ನೇಟೊ ಮುಖ್ಯಸ್ಥ ಮಾರ್ಕ್ ರೂಟ್ ಅವರೂ ಟ್ರಂಪ್‍ರನ್ನು ಅಭಿನಂದಿಸಿದ್ದಾರೆ.