"ಹೊಸ ಹೀರೊ ಉದಯವಾಗಿದ್ದಾನೆ": ಎಲಾನ್ ಮಸ್ಕ್ ರನ್ನು ಶ್ಲಾಘಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದ್ದು, ಈ ನಡುವೆ ತಮ್ಮನ್ನು ತಾವು ವಿಜೇತ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ತಮ್ಮ ಗೆಲುವಿನ ಭಾಷಣದಲ್ಲಿ ಟೆಸ್ಲಾ ಸಮೂಹದ ಒಡೆಯ ಎಲಾನ್ ಮಸ್ಕ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಎಲಾನ್ ಮಸ್ಕ್ ಅದ್ಭುತ ವ್ಯಕ್ತಿಯಾಗಿದ್ದು, ಅವರೊಂದಿಗೆ ನಾನು ಚುನಾವಣಾ ಪ್ರಚಾರ ಕೈಗೊಂಡಿದ್ದೆ ಎಂದು ಅವರು ಸ್ಮರಿಸಿದ್ದಾರೆ.
ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇದೀಗ ಹೊಸ ಹೀರೊ ಉದಯವಾಗಿದ್ದಾನೆ. ಅದು ಎಲಾನ್ ಮಸ್ಕ್. ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದು, . ಅವರು ಚುನಾವಣಾ ಪ್ರಚಾರದಲ್ಲಿ ಫಿಲಿಡೆಲ್ಫಿಯ ಹಾಗೂ ಪೆನ್ಸಿಲ್ವೇನಿಯದ ಕೆಲವು ಭಾಗಗಳಲ್ಲಿ ಎರಡು ವಾರಗಳ ಕಾಲ ಇದ್ದರು ಎಂದು ಪ್ರಶಂಸಿಸಿದರು.
ನಾನು ಸ್ಪೇಸ್ ಎಕ್ಸ್ ಉಡಾವಣೆ ನೋಡಿದೆ. ಇದನ್ನು ಎಲಾನ್ ಮಸ್ಕ್ ಮಾತ್ರ ಮಾಡಲು ಸಾಧ್ಯ. ಅದೇ ಕಾರಣಕ್ಕೆ ನಾನವರನ್ನು ಇಷ್ಟಪಡುತ್ತೇನೆ ಎಂದೂ ಟ್ರಂಪ್ ಹೊಗಳಿಕೆಯ ಸುರಿಮಳೆಗೆರೆದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಪ್ರಮುಖ ಸುದ್ದಿ ವಾಹಿನಿಗಳು ಇನ್ನೂ ಪ್ರಕಟಿಸಿರದಿದ್ದರೂ, ಫಾಕ್ಸ್ ಸುದ್ದಿ ಸಂಸ್ಥೆ ಮಾತ್ರ ಡೊನಾಲ್ಡ್ ಟ್ರಂಪ್ ಗೆಲುವನ್ನು ಘೋಷಿಸಿದೆ. ಇದರ ಬೆನ್ನಿಗೇ ತಾವು ವಿಜೇತನಾಗಿದ್ದೇನೆ ಎಂದು ಘೋಷಿಸಿರುವ ಡೊನಾಲ್ಡ್ ಟ್ರಂಪ್, ನಾನು ದೇಶದ ಸಮಸ್ಯೆಯನ್ನು ನಿವಾರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.