ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಜಾ ಬೆನ್ನಲ್ಲೇ ಇಸ್ರೇಲ್ ನಲ್ಲಿ ಭುಗಿಲೆದ್ದ ಪ್ರತಿಭಟನೆ
ಟೆಲ್ ಅವೀವ್ : ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ವಜಾಗೊಳಿಸಿರುವ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಸಾಮೂಹಿಕ ಪ್ರತಿಭಟನೆ ಭುಗಿಲೆದ್ದಿದೆ.
ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿರುವ ಮಧ್ಯೆ ರಕ್ಷಣಾ ಸಚಿವರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಟೆಲ್ ಅವೀವ್ ಮತ್ತು ಜೆರುಸಲೆಮ್ ನಲ್ಲಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಟೆಲ್ ಅವೀವ್‌ನ ಮುಖ್ಯ ಹೆದ್ದಾರಿಯನ್ನು ಬಂದ್ ಮಾಡಿ ಇಸ್ರೇಲ್ ಧ್ವಜಗಳನ್ನು ಹಿಡಿದು ದೀಪಗಳನ್ನು ಬೆಳಗಿ ಪ್ರತಿಭಟನೆ ನಡೆಸಿದ್ದಾರೆ.
ಜೆರುಸಲೆಮ್ ನಲ್ಲಿರುವ ನೆತನ್ಯಾಹು ಅವರ ನಿವಾಸದ ಬಳಿ ಕೂಡ ಇದೇ ರೀತಿಯ ಬೆಳವಣಿಗೆ ಕಂಡು ಬಂದಿದೆ. ಪ್ರತಿಭಟನೆಯ ವೇಳೆ ಅಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಅನೇಕ ಪ್ರತಿಭಟನಾಕಾರರು ನೆತನ್ಯಾಹು ರಾಜೀನಾಮೆಗೆ ಕರೆ ನೀಡಿದ್ದಾರೆ. ಹೊಸ ರಕ್ಷಣಾ ಮಂತ್ರಿಗಳು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿ ಒಪ್ಪಂದಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನನ್ನ ಮತ್ತು ಗ್ಯಾಲಂಟ್ ನಡುವಿನ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ನಂಬುತ್ತೇನೆ. ಯುದ್ಧದ ಮಧ್ಯೆ ಎಂದಿಗಿಂತಲೂ ಹೆಚ್ಚಾಗಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರ ನಡುವೆ ನಂಬಿಕೆಯ ಅವಶ್ಯಕತೆ ಇದೆ. ನಾವು ಆರಂಭದಲ್ಲಿ ಈ ನಂಬಿಕೆಯನ್ನು ಹೊಂದಿದ್ದೆವು. ಆದರೆ ಈಗ ಆ ನಂಬಿಕೆ ಕುಸಿಯುತ್ತಿದೆ ಎಂದು ನೆತನ್ಯಾಹ್ ಹೇಳಿದ್ದರು.