ಹೊಗೆ ಮಂಜು | ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ
ಲಾಹೋರ್ : ಶುಕ್ರವಾರ ಹೊಗೆ ಮಂಜಿನಿಂದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು ಎರಡು ಪ್ರಮುಖ ನಗರಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಪಂಜಾಬ್ ಪ್ರಾಂತದಲ್ಲಿ ಕಳೆದ ವಾರದಿಂದ ತೀವ್ರ ಹೊಗೆ ಆವರಿಸಿದ್ದು ವಾಯುಮಾಲಿನ್ಯವು ಸುಮಾರು 2 ದಶಲಕ್ಷ ಜನರನ್ನು ಅಸ್ವಸ್ಥಗೊಳಿಸಿದೆ. ಹೆಚ್ಚುತ್ತಿರುವ ಬಿಕ್ಕಟ್ಟನ್ನು ಎದುರಿಸುವ ಕ್ರಮವಾಗಿ ಪಂಜಾಬ್ ಪ್ರಾಂತದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸುವುದಾಗಿ ಸಚಿವೆ ಮರಿಯಮ್ ಔರಂಗಜೇಬ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ಸೂಚನೆಯವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು. ಹೋಟೆಲ್‍ಗಳನ್ನು ಸಂಜೆ 4ಕ್ಕೆ ಮುಚ್ಚಲಾಗುವುದು, ಆದರೆ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್ ಕೊಂಡೊಯ್ಯಲು ಅವಕಾಶವಿರುತ್ತದೆ. ಮುಲ್ತಾನ್ ಮತ್ತಿ ಲಾಹೋರ್ ನಗರಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದು ಎರಡೂ ನಗರಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.