ನಿಜ್ಜಾರ್ ಹತ್ಯೆ ಪ್ರಕರಣ:ಭಾರತೀಯ ನಂಟಿನ ಕುರಿತ ಪುರಾವೆ ಒದಗಿಸಿ

Update: 2023-09-20 17:29 GMT

ಸಾಂದರ್ಭಿಕ ಚಿತ್ರ

ಒಟ್ಟಾವ: ಖಾಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ನ ಹತ್ಯೆಯಲ್ಲಿ ಭಾರತದ ಏಜೆಂಟರು ಸಂಭಾವ್ಯ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನು ರುಜುವಾತು ಪಡಿಸಲು ಪ್ರಧಾನಿ ಜಸ್ಟಿನ್ ಟ್ರೂಡೊ ಸೂಕ್ತ ಪುರಾವೆ ಒದಗಿಸಬೇಕು ಎಂದು ಕೆನಡಾದ ಅಧಿಕೃತ ವಿಪಕ್ಷ ಕನ್ಸರ್ವೇಟಿವ್ ಪಕ್ಷದ ಮುಖಂಡರು ಬುಧವಾರ ಆಗ್ರಹಿಸಿದ್ದಾರೆ.

ಸೋಮವಾರ ಪ್ರಧಾನಿ ಟ್ರೂಡೊ ಸಂಸತ್ತಿನಲ್ಲಿ ಹೇಳಿಕೆ ನೀಡಿದಾಗ ವಿರೋಧ ಪಕ್ಷದ ಮುಖಂಡ ಪಿಯರೆ ಪೊಲಿಯೆವರ್ ಸರಕಾರದ ಪರ ಧ್ವನಿಗೂಡಿಸಿದ್ದರು. ಆದರೆ ಬುಧವಾರ ವಿಭಿನ್ನ ಹೇಳಿಕೆ ನೀಡಿದ ಅವರು, ಈ ರೀತಿಯ ಕಟು ಆರೋಪವನ್ನು ದೃಢೀಕರಿಸುವ ಪುರಾವೆ ಒದಗಿಸುವಂತೆ ಆಗ್ರಹಿಸಿದ್ದಾರೆ.

`ಪ್ರಧಾನಿಯವರು ಎಲ್ಲಾ ವಿಷಯಗಳಲ್ಲೂ ಸ್ಪಷ್ಟವಾಗಿರಬೇಕು. ಕೆನಡಿಯನ್ನರು ತೀರ್ಪು ನೀಡಲು ಸಾಧ್ಯವಿರುವ ಎಲ್ಲಾ ಪುರಾವೆಗಳ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯವಿದೆ ಎಂದವರು ಒಟ್ಟಾವದಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಆರೋಪಗಳು ಸುಳ್ಳಾಗಿದ್ದರೆ ಅಥವಾ ನಂಬಲರ್ಹವಾಗಿರದಿದ್ದರೆ ಅದರ ಪರಿಣಾಮ ಏನಾದೀತು ಎಂಬ ಪ್ರಶ್ನೆಗೆ ಅವರು `ವಾಸ್ತವ' ಎಂದಷ್ಟೇ ಉತ್ತರಿಸಿದರು.

`ಸಂಸತ್ತಿನಲ್ಲಿ ಹೇಳಿದ ಮಾತನ್ನೇ ಸೋಮವಾರ ವಿಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಟ್ರೂಡೊ ಪುನರುಚ್ಚರಿಸಿದ್ದಾರೆ. ಆದರೆ ನಮಗೆ ವಾಸ್ತವ ಅಂಶಗಳ ಅಗತ್ಯವಿದೆ. ಪ್ರಧಾನಿ ಯಾವುದೇ ವಾಸ್ತವಾಂಶ ಒದಗಿಸಿಲ್ಲ. ಅವರು ಹೇಳಿಕೆ ನೀಡಿದ್ದಾರಷ್ಟೇ. ನನ್ನೊಡನೆ ಖಾಸಗಿಯಾಗಿ ಮಾತನಾಡಿದಾಗಲೂ ಅವರು ಹೊಸದೇನನ್ನೂ ಹೇಳಿಲ್ಲ. ಆದ್ದರಿಂದ ನಮಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ' ಎಂದವರು ಹೇಳಿದ್ದಾರೆ.

ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಚೀನಾ ಹಲವು ವರ್ಷಗಳಿಂದ ಹಸ್ತಕ್ಷೇಪ ನಡೆಸುತ್ತಿದ್ದರೂ ಈ ಬಗ್ಗೆ ತನಗೆನೂ ತಿಳಿದಿಲ್ಲ ಎಂದು ಟ್ರೂಡೊ ಹೇಳಿದ್ದರು. ಚೀನಾವು ಕೆನಡಾದ ಇಬ್ಬರು ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಾಗಲೂ ಅವರು ಯಾವ ಕ್ರಮವನ್ನೂ ಕೈಗೊಂಡಿಲ್ಲ' ಎಂದು ಪಿಯರೆ ಪೊಲಿಯೆವರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ, `ನ್ಯಾಷನಲ್ ಪೋಸ್ಟ್' ದಿನಪತ್ರಿಕೆಯ ಸಂಪಾದಕೀಯದಲ್ಲಿ ` ಟ್ರೂಡೋ ತನ್ನ ಎಲ್ಲಾ ವ್ಯವಸ್ಥೆಗಳನ್ನೂ ಕ್ರಮಬದ್ಧವಾಗಿ ಇರಿಸಿಕೊಳ್ಳದೆ ಈ ರೂಪಕಾಲಂಕಾರದ ಬಾಂಬ್ ಉದುರಿಸಿರುವುದು ಒಂದು ವೇಳೆ ಕಂಡುಬಂದರೆ ಇದೊಂದು ದೊಡ್ಡ ಹಗರಣವಾಗಲಿದೆ. ಟ್ರೂಡೊ ಅವರಿಂದ ಹೆಚ್ಚಿನ ಮಾಹಿತಿಯನ್ನು ಕೆನಡಿಯನ್ನರು ಬಯಸಿದ್ದಾರೆ' ಎಂದು ಬರೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News