ಅಧ್ಯಕ್ಷೀಯ ಅಭ್ಯರ್ಥಿ ರೇಸ್‍ನಿಂದ ಹಿಂದೆ ಸರಿಯಲು ನಿಕ್ಕಿ ಹ್ಯಾಲೆ ನಿರ್ಧಾರ
ವಾಷಿಂಗ್ಟನ್: `ಸೂಪರ್ ಟ್ಯೂಸ್ಡೇ' ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಜಿಒಪಿ ಅಧ್ಯಕ್ಷೀಯ ಅಭ್ಯರ್ಥಿ ರೇಸ್‍ನಿಂದ ಹಿಂದೆ ಸರಿಯಲು ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇದರೊಂದಿಗೆ ಇದೀಗ ಜಿಒಪಿ (ಗ್ರಾಂಡ್ ಓಲ್ಡ್ ಪಾರ್ಟಿ, ಅಂದರೆ ರಿಪಬ್ಲಿಕನ್ ಪಕ್ಷ)ಯ ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಹೊರಹೊಮ್ಮುವುದು ಬಹುತೇಕ ನಿಚ್ಚಳವಾಗಿದ್ದು ಸತತ ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಜೋ ಬೈಡನ್‍ರನ್ನು ಎದುರಿಸುವ ಸಾಧ್ಯತೆಯಿದೆ.
ಮಂಗಳವಾರ 13 ರಾಜ್ಯಗಳಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ 12ರಲ್ಲಿ ಟ್ರಂಪ್ ಗೆದ್ದರೆ ವೆರ್ಮೋಂಟ್‍ನಲ್ಲಿ ಮಾತ್ರ ಹ್ಯಾಲೆ ಗೆಲುವು ಸಾಧಿಸಿದರು. ಹ್ಯಾಲೆಯ ಭದ್ರಕೋಟೆ ಎಂದು ಬಿಂಬಿಸಲ್ಪಟ್ಟಿದ್ದ ವರ್ಜೀನಿಯಾ, ಮಸಚುಸೆಟ್ಸ್ ಮತ್ತು ಮಯಿನ್ ರಾಜ್ಯಗಳಲ್ಲಿ ಟ್ರಂಪ್ ಮೇಲುಗೈ ಸಾಧಿಸಿದ ಬಳಿಕ ಅಧ್ಯಕ್ಷೀಯ ಅಭ್ಯರ್ಥಿ ರೇಸ್‍ನಿಂದ ಹಿಂದೆ ಸರಿಯುವಂತೆ ಪಕ್ಷದ ಸದಸ್ಯರೇ ಸಲಹೆ ನೀಡಿದ್ದರು. ಭಾರತೀಯ ಅಮೆರಿಕನ್ ನಿಕ್ಕಿ ಹ್ಯಾಲೆ ಮಧ್ಯಮ ವರ್ಗದ ಹಾಗೂ ಕಾಲೇಜು ಶಿಕ್ಷಿತ ಮತದಾರರಲ್ಲಿ ಜನಪ್ರಿಯರಾಗಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನು ಹ್ಯಾಲೆ ನಿರಾಕರಿಸಿದ್ದು, ನಾನೋರ್ವ ರಿಪಬ್ಲಿಕನ್ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಆದ್ದರಿಂದ ಗುರುತುಪಟ್ಟಿ ಇಲ್ಲದೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.