ಹಸೀನಾ ಅವರ ಪಕ್ಷವನ್ನು ನಿಷೇಧಿಸುವ ಯೋಜನೆಯಿಲ್ಲ : ಬಾಂಗ್ಲಾ ಮಧ್ಯಂತರ ಸರಕಾರ ಸ್ಪಷ್ಟನೆ
ಢಾಕಾ : ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸುವ ಯಾವುದೇ ಯೋಜನೆಯಿಲ್ಲ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರ ಸೋಮವಾರ ಹೇಳಿದೆ.
`ಅವಾಮಿ ಲೀಗ್ ಪಕ್ಷ ಬಾಂಗ್ಲಾದೇಶಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ನಾವದನ್ನು ನಿರಾಕರಿಸುವಂತಿಲ್ಲ. ಚುನಾವಣೆ ಬಂದಾಗ ಅವರು ಕೂಡಾ ಸ್ಪರ್ಧಿಸಬೇಕು ಎಂದು ಮಧ್ಯಂತರ ಸರಕಾರದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಸಖಾವತ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಶೇಕ್ ಹಸೀನಾ ದೇಶದಿಂದ ಪಲಾಯನ ಮಾಡಿರುವುದು ಸರಿಯಲ್ಲ ಎಂದ ಅವರು `ದೇಶಕ್ಕೆ ಮರಳುವ ಯೋಜನೆಯಿದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ದೇಶ ಬಿಟ್ಟು ತೆರಳಿದ್ದು ಯಾಕೆ ಎಂದು ಮೊದಲು ಹೇಳಿ ? ಇದು ನಿಮ್ಮ ದೇಶ. ಮರಳಿ ಬರಲು ನಿಮಗೆ ಸ್ವಾಗತವಿದೆ. ಆದರೆ ದಯವಿಟ್ಟು ಪ್ರಚೋದಿಸದಿರಿ. ನೀವು ಹೀಗೆ ಮಾಡಿದರೆ ಅದು ಜನರನ್ನು ಮತ್ತಷ್ಟು ಕೆರಳಿಸಿದಂತಾಗುತ್ತದೆ ಎಂದು ಹಸೀನಾರನ್ನು ಉಲ್ಲೇಖಿಸಿ ಹೇಳಿದರು.
ಹಸೀನಾ ಅವರು ಹೊಸ ಮುಖಗಳೊಂದಿಗೆ ಅವಾಮಿ ಲೀಗ್ ಪಕ್ಷದಲ್ಲಿ ಸುಧಾರಣೆ ತರುವಂತೆ ಇದೇ ವೇಳೆ ಅವರು ಹಸೀನಾರನ್ನು ಆಗ್ರಹಿಸಿದ್ದಾರೆ.
ಈ ಮಧ್ಯೆ, ಮಧ್ಯಂತರ ಸರಕಾರ ಕಾನೂನು ಸುವ್ಯವಸ್ಥೆ ಮರುಸ್ಥಾಪನೆಗೆ ಕಠಿಣ ಕ್ರಮ ಕೈಗೊಂಡಿರುವ ನಡುವೆಯೇ ಬಾಂಗ್ಲಾದೇಶದ ಪೊಲೀಸರು, ಅರೆಸೇನಾ ಪಡೆ ಹಾಗೂ ಸಶಸ್ತ್ರ ಪಡೆಯ ಸಿಬಂದಿಗಳ ಮೇಲೆ ದಾಳಿಯ ಘಟನೆಗಳು ಮರುಕಳಿಸುತ್ತಿವೆ ಎಂದು `ದಿ ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಢಾಕಾದ ಮನೆಯೊಂದರಿಂದ ಬಂದೂಕು ಹಾಗೂ ಎರಡು ಮೊಬೈಲ್ ಫೋನ್ಗಸಳನ್ನು ಸೇನಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ದೇಶದಲ್ಲಿನ 639 ಪೊಲೀಸ್ ಠಾಣೆಗಳಲ್ಲಿ 599 ಪೊಲೀಸ್ ಠಾಣೆಗಳು ಕಾರ್ಯಾಚರಣೆ ಪುನರಾರಂಭಿಸಿದೆ ಎಂದು ವರದಿ ಹೇಳಿದೆ.
►ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಸರಕಾರ ಕಳವಳ
ಶೇಕ್ ಹಸೀನಾ ಅವರ ಪದಚ್ಯುತಿಯ ಬಳಿಕ ದೇಶದಲ್ಲಿ ಹಿಂದುಗಳು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದುಗಳು ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದು ಇವರಲ್ಲಿ ಹೆಚ್ಚಿನವರು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಮೀಸಲಾತಿ ವಿರೋಧಿ ಪ್ರತಿಭಟನೆಗೆ ಮಣಿದು ಕಳೆದ ವಾರ ಶೇಕ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದಂದಿನಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ದೇವಸ್ಥಾನ, ಸಂಸ್ಥೆ ಹಾಗೂ ಮನೆಗಳ ವಿರುದ್ಧ ದಾಳಿ ಘಟನೆ ಹೆಚ್ಚಿದೆ. ದಾಳಿಯನ್ನು ವಿರೋಧಿಸಿ ರವಿವಾರ ಢಾಕಾದಲ್ಲಿ ಹಿಂದು ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದು `ದಿ ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ತೀವ್ರ ಕಳವಳದಿಂದ ಗಮನಿಸಲಾಗಿದೆ. ತಕ್ಷಣ ಪ್ರತಿನಿಧಿ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಕುಳಿತು ಇಂತಹ ಹೇಯ ದಾಳಿಗಳನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಲಾಗುವುದು' ಎಂದು ಮಧ್ಯಂತರ ಸರಕಾರ ಹೇಳಿದೆ.