ದಕ್ಷಿಣ ಕೊರಿಯಾಕ್ಕೆ ಮತ್ತೆ ತ್ಯಾಜ್ಯ ತುಂಬಿದ ಬಲೂನು ಕಳಿಸಿದ ಉತ್ತರ ಕೊರಿಯಾ
ಸಿಯೋಲ್ : ಉತ್ತರ ಕೊರಿಯಾವು ತ್ಯಾಜ್ಯ ತುಂಬಿದ 600 ಬಲೂನುಗಳನ್ನು ದಕ್ಷಿಣ ಕೊರಿಯಾಕ್ಕೆ ತೇಲಿಬಿಟ್ಟಿದೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ಆರೋಪಿಸಿದ್ದಾರೆ.
ಕಳೆದ ಮಂಗಳವಾರದಿಂದ ಉತ್ತರಕೊರಿಯಾ ತ್ಯಾಜ್ಯ ತುಂಬಿದ ಸುಮಾರು 900ರಷ್ಟು ಬಲೂನುಗಳನ್ನು ದಕ್ಷಿಣದತ್ತ ಹಾರಿಬಿಟ್ಟಿದೆ. ಈ ಬಲೂನುಗಳಲ್ಲಿ ಸಿಗರೇಟು ತುಂಡಿನಿಂದ ಹಿಡಿದು ಪ್ಲಾಸ್ಟಿಕ್ ಮತ್ತು ರಟ್ಟಿನ ತುಂಡುಗಳನ್ನು, ತ್ಯಾಜ್ಯಗಳನ್ನು ತುಂಬಿಸಲಾಗಿದೆ. ಇದು ನಮ್ಮ ಪರಮಾಣುಶಕ್ತ ನೆರೆರಾಷ್ಟ್ರದ ತರ್ಕಬದ್ಧವಲ್ಲದ ಮತ್ತು ಕೀಳುಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ದಕ್ಷಿಣ ಕೊರಿಯಾ ಟೀಕಿಸಿದೆ.
ಇತ್ತೀಚಿನ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಕ್ಕೆ ಹೋಲಿಸಿದರೆ, ಕಸದ ಅಭಿಯಾನವು ಉತ್ತರ ಕೊರಿಯಾದ ವಿರುದ್ಧದ ವಿಶ್ವಸಂಸ್ಥೆಯ ನಿರ್ಬಂಧಗಳ ಉಲ್ಲಂಘನೆಯಾಗುವುದಿಲ್ಲ. `ತ್ಯಾಜ್ಯ ಬಲೂನುಗಳ ದಾಳಿ'ಯನ್ನು ನಿಲ್ಲಿಸದಿದ್ದರೆ ಕಠಿಣ ಪ್ರತಿಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕೊರಿಯಾ ಎಚ್ಚರಿಕೆ ನೀಡಿದೆ.
ಬಲೂನುಗಳಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗದಿದ್ದರೂ ಅದರಿಂದ ದೂರ ಇರುವಂತೆ ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಶನಿವಾರ ಸಂಜೆಯಿಂದ ಗಂಟೆಗೆ ಸುಮಾರು 30 ಬಲೂನುಗಳು ಗಾಳಿಯಲ್ಲಿ ಹಾರಿಬರುತ್ತಿದ್ದು ರಾಜಧಾನಿ ಸಿಯೋಲ್ ಸೇರಿದಂತೆ ಉತ್ತರದ ಪ್ರಾಂತಗಳಲ್ಲಿ ಭೂಸ್ಪರ್ಷ ಮಾಡಿವೆ. ಇವುಗಳನ್ನು ಮುಟ್ಟಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಮೈಕ್‍ಗಳ ಮೂಲಕ ಪ್ರಸಾರ ಮಾಡುತ್ತಿದ್ದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಮಿತಿ ರವಿವಾರ ಸಭೆ ಸೇರಿ ಬಲೂನು ದಾಳಿಗೆ ಪ್ರತಿಕ್ರಮದ ಬಗ್ಗೆ ಚರ್ಚೆ ನಡೆಸಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.