ರಶ್ಯಕ್ಕೆ 7000 ಕಂಟೈನರ್ ಯುದ್ಧ ಸಾಮಾಗ್ರಿ ರವಾನಿಸಿದ ಉತ್ತರ ಕೊರಿಯಾ: ವರದಿ
ಸಿಯೋಲ್ : ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ಬೆಂಬಲವಾಗಿ ಕಳೆದ ವರ್ಷದಿಂದ ಉತ್ತರ ಕೊರಿಯಾವು ರಶ್ಯಕ್ಕೆ ಸುಮಾರು 7000 ಕಂಟೈನರ್ ಗಳಷ್ಟು ಯುದ್ಧಸಾಮಾಗ್ರಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಶಿನ್ ವಾನ್‍ಸಿಕ್ ಸೋಮವಾರ ಹೇಳಿದ್ದಾರೆ.
ಉತ್ತರ ಕೊರಿಯಾವು ತನ್ನ ಪೂರ್ವದ ಸಮುದ್ರದತ್ತ ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್‍ನ ರಕ್ಷಣಾ ಪಡೆಗಳು ವರದಿ ಮಾಡಿದ ಬಳಿಕ ಸಿಯೋಲ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶಿನ್ ವಾನ್‍ಸಿಕ್ ` 2022ರಲ್ಲಿ ರಶ್ಯವು ಉಕ್ರೇನ್‍ನ ಮೇಲೆ ನಡೆಸಿದ ಆಕ್ರಮಣವನ್ನು ತನ್ನ ಲಾಭಕ್ಕೆ ಬಳಸಿಕೊಂಡ ಉತ್ತರ ಕೊರಿಯಾ ತನ್ನ ಕ್ಷಿಪಣಿ ಪರೀಕ್ಷೆಯನ್ನು ಹೆಚ್ಚಿಸಿತು ಹಾಗೂ ರಶ್ಯಕ್ಕೆ ಯುದ್ಧಸಾಮಾಗ್ರಿ ರವಾನಿಸುವ ಮೂಲಕ ರಶ್ಯವನ್ನು ಬೆಂಬಲಿಸುತ್ತಿದೆ. ಜಾಗತಿಕ ರಂಗದಲ್ಲಿ ರಾಜತಾಂತ್ರಿಕವಾಗಿ ಪ್ರತ್ಯೇಕಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಉತ್ತರ ಕೊರಿಯಾವು ಅಮೆರಿಕದ ವಿರುದ್ಧದ ಸಂಯುಕ್ತ ವೇದಿಕೆಗೆ ಸೇರ್ಪಡೆಗೊಂಡಿದೆ' ಎಂದು ಹೇಳಿದ್ದಾರೆ.
ಆರಂಭದಲ್ಲಿ ಹಡಗುಗಳ ಮೂಲಕ ಯುದ್ಧ ಸಾಮಾಗ್ರಿ ರವಾನಿಸುತ್ತಿದ್ದ ಉತ್ತರ ಕೊರಿಯಾ, ಬಳಿಕ ರೈಲ್ವೇ ಜಾಲವನ್ನು ಬಳಸಿಕೊಂಡು ಗಡಿಭಾಗದ ಮೂಲಕ ರಶ್ಯಕ್ಕೆ ಫಿರಂಗಿ ಗುಂಡುಗಳು ಹಾಗೂ ಉತರ ಶಸ್ತ್ರಾಸ್ತ್ರ ರವಾನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ರಶ್ಯದಿಂದ 9 ಸಾವಿರಕ್ಕೂ ಅಧಿಕ ಕಂಟೈನರ್ ಗಳಷ್ಟು ತೈಲ ಹಾಗೂ ಇತರ ಅಗತ್ಯ ವಸ್ತುಗಳನ್ನು ಒದಗಿಸಿರುವ ಸಾಧ್ಯತೆಯಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಉತ್ತರ ಕೊರಿಯಾದ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಆಮದಿನ ಮೇಲೆ ವಿಧಿಸಿರುವ ಮಿತಿಯ ಉಲ್ಲಂಘನೆಯಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ದಕ್ಷಿಣ ಕೊರಿಯಾ ಪ್ರತಿಪಾದಿಸಿದೆ.