ಹೊಸ ರಾಕೆಟ್ ಲಾಂಚರ್ ನಿಯಂತ್ರಣ ವ್ಯವಸ್ಥೆ ಪರೀಕ್ಷಿಸಿದ ಉತ್ತರ ಕೊರಿಯಾ
ಪೋಂಗ್ಯಾಂಗ್ : ಬಹು ರಾಕೆಟ್ ಲಾಂಚರ್ ಗಾಗಿ ಹೊಸ ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಅದು ತನ್ನ ರಕ್ಷಣಾ ಸಾಮರ್ಥ್ಯಗಳಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾಗಲಿದೆ ಎಂದು ಉತ್ತರ ಕೊರಿಯಾ ಸೋಮವಾರ ಹೇಳಿದೆ.
ರಾಕೆಟ್ ಲಾಂಚರ್‍ಗಳಿಗಾಗಿ ನಿಯಂತ್ರಿತ ಶೆಲ್ ಮತ್ತು ಬ್ಯಾಲಿಸ್ಟಿಕ್ ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ಯೋಂಗ್ಯಾಗ್‍ನ `ಅಕಾಡೆಮಿ ಆಫ್ ಡಿಫೆನ್ಸ್ ಸೈಯನ್ಸ್' 240 ಎಂಎಂ ಕ್ಯಾಲಿಬರ್ ಬಹು ರಾಕೆಟ್ ಲಾಂಚರ್ ಶೆಲ್‍ಗಳ ಬ್ಯಾಲಿಸ್ಟಿಕ್ ನಿಯಂತ್ರಣ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಹೊಸ ರಾಕೆಟ್ ಲಾಂಚರ್ ಅನ್ನು ಮರುಮೌಲ್ಯಮಾಪನ ಮಾಡಲಾಗುವುದು ಮತ್ತು ಅದರ ಯುದ್ಧಭೂಮಿ ಸಾಮರ್ಥ್ಯವನ್ನು ವರ್ಧಿಸಲಾಗುವುದು ಎಂದು ಸರಕಾರಿ ಸ್ವಾಮ್ಯದ ಕೆಸಿಎನ್‍ಎ ವರದಿ ಮಾಡಿದೆ.
ದಕ್ಷಿಣ ಕೊರಿಯಾವು ಉತ್ತರ ಕೊರಿಯಾದ ಅತ್ಯಂತ ಅಪಾಯಕಾರಿ ಮತ್ತು ಮೊದಲ ಶತ್ರುವಾಗಿದ್ದು ಒಂದು ವೇಳೆ ಅದು ದಾಳಿ ನಡೆಸಿದರೆ ಅದನ್ನು ಅಂತ್ಯಗೊಳಿಸಲು ತಾನು ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷ ಕಿಮ್‍ಜಾಂಗ್ ಉನ್ ಪುನರುಚ್ಚರಿಸಿದ್ದಾರೆ.