ಪರಮಾಣು ಶಕ್ತ ಜಲಾಂತರ್ಗಾಮಿ ಪರೀಕ್ಷಿಸಿದ ಉತ್ತರ ಕೊರಿಯಾ: ವರದಿ
ಪ್ಯೋಂಗ್ಯಾಂಗ್: ಅಮೆರಿಕದ ಸಮರನೌಕೆಯನ್ನು ಒಳಗೊಂಡ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‍ನ ಜಂಟಿ ಸಮರಾಭ್ಯಾಸಕ್ಕೆ ಉತ್ತರವಾಗಿ `ನೀರೊಳಗಿನ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆ'ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಉತ್ತರ ಕೊರಿಯಾ ಶುಕ್ರವಾರ ಹೇಳಿದೆ.
ಮೂರು ದೇಶಗಳ ನೌಕಾ ಸಮರಾಭ್ಯಾಸವು ಉತ್ತರ ಕೊರಿಯಾದ ಭದ್ರತೆಯ ಮೇಲೆ ಗಂಭೀರ ಅಪಾಯವಾಗಿರುವುದರಿಂದ ಇದಕ್ಕೆ ಪ್ರತಿಯಾಗಿ ಕೊರಿಯಾದ ಪೂರ್ವ ಸಮುದ್ರದಲ್ಲಿ `ಹೇಯಿಲ್ 5-23' ಎಂಬ ಪ್ರಮುಖ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಉತ್ತರ ಕೊರಿಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕೆಸಿಎನ್‍ಎ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ನೀರಿನೊಳಗಿನ ಪರಮಾಣು ದಾಳಿ ಸಾಮರ್ಥ್ಯದ ಡ್ರೋನ್‍ನ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಇದು ವಿಕಿರಣಶೀಲ ತ್ಸುನಾಮಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಈ ಹಿಂದೆ ಉತ್ತರ ಕೊರಿಯಾ ಹೇಳಿತ್ತು.
ಕಳೆದ ವಾರ ಉತ್ತರ ಕೊರಿಯಾ ಹೈಪರ್‍ಸಾನಿಕ್ ಕ್ಷಿಪಣಿಯನ್ನು ಉಡಾವಣೆ ನಡೆಸಿದ್ದಕ್ಕೆ ಪ್ರತಿಯಾಗಿ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ದಕ್ಷಿಣ ಕೊರಿಯಾದ ಜೆಜು ದ್ವೀಪದ ಬಳಿ ನೌಕಾ ಸಮರಾಭ್ಯಾಸ ನಡೆಸಿದ್ದವು. ಈ ಸಮರಾಭ್ಯಾಸವು ಪ್ರಾದೇಶಿಕ ಪರಿಸ್ಥಿತಿಯನ್ನು ಮತ್ತಷ್ಟು ಅಸ್ಥಿರಗೊಳಿಸಲಿದೆ ಮತ್ತು ಉತ್ತರ ಕೊರಿಯಾದ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದಾರೆ.