ಅಮೆರಿಕ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಕ್ರಮ: ಉತ್ತರ ಕೊರಿಯಾ ಬೆದರಿಕೆ
ಪೋಂಗ್ಯಾಂಗ್: ಅಮೆರಿಕದ ಮುಖ್ಯ ಭೂಭಾಗವನ್ನು ತಲುಪುವ ಸಾಮರ್ಥ್ಯ ವುಳ್ಳ ಅತ್ಯಾಧುನಿಕ ಖಂಡಾಂತರ ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ವಿಯಾದ ಬೆನ್ನಲ್ಲೇ ಅಮೆರಿಕ ನೇತೃತ್ವದ ಮಿಲಿಟರಿ ಬೆದರಿಕೆಯನ್ನು ನಿಗ್ರಹಿಸಲು ಇನ್ನಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ಜಾಂಗ್ ಉನ್ ಎಚ್ಚರಿಕೆ ನೀಡಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್ಎ ಸುದ್ಧಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಕಿಮ್ ಅವರು ತಮ್ಮ ಬೆಳೆಯುತ್ತಿರುವ ಕ್ಷಿಪಣಿ ಶಸ್ತ್ರಾಗಾರದಲ್ಲಿ ವಿಶ್ವಾಸ ಹೊಂದಿದ್ದಾರೆ ಮತ್ತು ಮುಂದಿನ ವರ್ಷ ಅಮೆರಿಕದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಶಸ್ತ್ರಾಸ್ತ್ರಗಳ ಪರೀಕ್ಷಾ ಚಟುವಟಿಕೆಗಳನ್ನು ಮುಂದುವರಿಸುವ ಸಾಧ್ಯತೆಯಿದೆ. ಆದರೆ ಅಮೆರಿಕದ ಮುಖ್ಯ ಭೂಭಾಗವನ್ನು ತಲುಪುವ ಕ್ಷಿಪಣಿಯನ್ನು ಹೊಂದಿರುವುದನ್ನು ಸಾಬೀತುಪಡಿಸಲು ಉತ್ತರ ಕೊರಿಯಾ ಇನ್ನಷ್ಟು ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಉತ್ತರ ಕೊರಿಯಾ ಸೋಮವಾರ ಉಡಾವಣೆ ಮಾಡಿದ ಹ್ವಾಸಾಂಗ್-18 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯು ಉತ್ತರ ಕೊರಿಯಾದ ಅತ್ಯಂತ ಸಶಕ್ತ ಶಸ್ತ್ರಾಸ್ತ್ರವೆಂದು ಪರಿಗಣಿಸಲ್ಪಟ್ಟಿದೆ. ಸೋಮವಾರದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇದು 6,518 ಕಿ.ಮೀ ಎತ್ತರದಲ್ಲಿ ಚಲಿಸಿದ್ದು 73 ನಿಮಿಷದಲ್ಲಿ 1,002 ಕಿ.ಮೀ ದೂರ ಕ್ರಮಿಸಿ ಪೂರ್ವ ಕರಾವಳಿಯ ನಿಗದಿತ ಗುರಿಗೆ ಅಪ್ಪಳಿಸಿದೆ. `ಈ ಯಶಸ್ವಿ ಪ್ರಯೋಗದ ಬಗ್ಗೆ ಅಧ್ಯಕ್ಷರು ತೃಪ್ತಿ ವ್ಯಕ್ತಪಡಿಸಿದ್ದು ಈಗ ನಮ್ಮ ವಿರುದ್ಧ ದಾಳಿ ನಡೆಸುವ ಮೊದಲು ಶತ್ರುಗಳು ಮತ್ತೊಮ್ಮೆ ಯೋಚನೆ ಮಾಡುವಂತಾಗಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ' ಎಂದು ಕೆಸಿಎನ್ಎ ವರದಿ ಹೇಳಿದೆ.