ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆ: ಅಮೆರಿಕದ ಪ್ರಸ್ತಾವನೆ ತಿರಸ್ಕರಿಸಿದ ರಶ್ಯ
ಮಾಸ್ಕೊ: ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಯನ್ನು ಪುನರಾರಂಭಿಸುವ ಅಮೆರಿಕದ ಪ್ರಸ್ತಾವನೆಯನ್ನು ರಶ್ಯ ತಿರಸ್ಕರಿಸಿದ್ದು ಉಕ್ರೇನ್‍ಗೆ ಅಮೆರಿಕ ಮಿಲಿಟರಿ ನೆರವು ನೀಡುತ್ತಿರುವುದರಿಂದ ಇದು ಸಾಧ್ಯವಿಲ್ಲ ಎಂದಿದೆ.
ವಾರ್ಷಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ` ರಶ್ಯದ ಪ್ರದೇಶದ ಮೇಲಿನ ದಾಳಿಯನ್ನು ತೀವ್ರಗೊಳಿಸಲು ಉಕ್ರೇನ್ ಅನ್ನು ಪ್ರಚೋದಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳು ಜಾಗತಿಕ ಭದ್ರತೆಯನ್ನು ಅಪಾಯದ ಅಂಚಿಗೆ ತಳ್ಳಿವೆʼ ಎಂದು ಆರೋಪಿಸಿದರು. ಆದರೆ ಪಾಶ್ಚಿಮಾತ್ಯರು ಉಕ್ರೇನ್‍ಗೆ ಎಷ್ಟೇ ನೆರವು ನೀಡಿದರೂ ಸಂಘರ್ಷಕ್ಕೆ ಸಂಬಂಧಿಸಿದ ನಮ್ಮ ಗುರಿಯನ್ನು ನಾವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸುವ ಯಾವುದೇ ಪ್ರಯತ್ನವನ್ನೂ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳು ತಡೆಯುತ್ತಿವೆ. ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳ್ಳುವುದು ಅವರಿಗೆ ಬೇಕಿಲ್ಲ. ಉಕ್ರೇನ್ ಅನ್ನು ಮುಂದಿಟ್ಟುಕೊಂಡು ರಶ್ಯವನ್ನು ದುರ್ಬಲಗೊಳಿಸುವುದು ಅವರ ಉದ್ದೇಶವಾಗಿದೆ. ರಶ್ಯದ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸುವಂತೆ ಉಕ್ರೇನ್‍ಗೆ ಪ್ರಚೋದನೆ ನೀಡುವ ಪಾಶ್ಚಿಮಾತ್ಯರ ನಡೆ ಹೊಸ ಕಾರ್ಯತಂತ್ರದ ಅಪಾಯವನ್ನು ಮುಂದೊಡ್ಡಿದೆ ಎಂದು ಲಾವ್ರೋವ್ ಹೇಳಿದ್ದಾರೆ.
ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ಬಗ್ಗೆ ಮಾತುಕತೆ ಪುನರಾರಂಭಿಸುವ ಮೂಲಕ ರಶ್ಯದ ಪರಮಾಣು ನೆಲೆಗಳನ್ನು ಪರಿಶೀಲಿಸುವ ತಂತ್ರವನ್ನು ಅಮೆರಿಕ ಹೊಂದಿದೆ. ಆದರೆ ಯಾವುದೇ ಮಾತುಕತೆ ಪುನರಾರಂಭಕ್ಕೂ ಮುನ್ನ ಅಮೆರಿಕವು ರಶ್ಯದ ಕುರಿತ ತನ್ನ ಕಾರ್ಯನೀತಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಲಾವ್ರೋವ್ ಆಗ್ರಹಿಸಿದ್ದಾರೆ.