ಉತ್ತರ ಕೊರಿಯಾದಿಂದ ಪಲಾಯನ ಮಾಡಿದವರ ಸಂಖ್ಯೆ ಹೆಚ್ಚಳ: ವರದಿ

Update: 2024-01-20 16:18 GMT

Photo:NDTV

ಸಿಯೋಲ್: ಕಳೆದ ವರ್ಷ(2023) ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಕ್ಕೆ ನಿಷ್ಟೆ ಬದಲಾಯಿಸಿದವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

2023ರಲ್ಲಿ ದಾಖಲೆ ಸಂಖ್ಯೆಯ 196 ಮಂದಿ ದಕ್ಷಿಣ ಕೊರಿಯಾಕ್ಕೆ ನಿಷ್ಟೆ ಬದಲಿಸಿದ್ದು ಇದರಲ್ಲಿ ಯುವಜನತೆ ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು 84%ದಷ್ಟು ಮಹಿಳೆಯರು ಮತ್ತು ಬಾಲಕಿಯರು ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಕೋವಿಡ್ ಸೋಂಕಿಗೂ ಹಿಂದಿನ ವರ್ಷ ಅಂದರೆ 2019ರಲ್ಲಿ 1,047 ಮಂದಿ ಉತ್ತರ ಕೊರಿಯಾದಿಂದ ನಿಷ್ಟೆ ಬದಲಿಸಿದ್ದು ದಾಖಲೆಯಾಗಿದೆ. ಆ ಬಳಿಕ ಗಡಿಪ್ರದೇಶವನ್ನು ಮುಚ್ಚಿದ್ದು, ನಿರ್ಬಂಧ ಕ್ರಮದಿಂದಾಗಿ ನಿಷ್ಟೆ ಬದಲಿಸುವವರ ಪ್ರಮಾಣ ಇಳಿಮುಖಗೊಂಡಿತ್ತು. 2021ರಲ್ಲಿ 63, 2022ರಲ್ಲಿ 67 ಮಂದಿ ದಕ್ಷಿಣ ಕೊರಿಯಾಕ್ಕೆ ಸ್ಥಳಾಂತರಗೊಂಡಿದ್ದರು. ವಿದೇಶದಲ್ಲಿ ಉದ್ಯೋಗ ಮತ್ತಿತರ ಕಾರಣಗಳಿಂದ ನೆಲೆಸಿರುವ ಉತ್ತರ ಕೊರಿಯನ್ನರು ಸ್ವದೇಶಕ್ಕೆ ವಾಪಸಾಗುವುದನ್ನು ಬಯಸುತ್ತಿಲ್ಲ. ಆ ದೇಶದಲ್ಲಿ ಮಾನವ ಹಕ್ಕುಗಳ ಮೇಲಿನ ನಿರ್ಬಂಧ, ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ನಿರಂಕುಶ ಆಡಳಿತದಿಂದ ಬೇಸತ್ತಿರುವವರು ದಕ್ಷಿಣ ಕೊರಿಯಾದ ಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿರಲು ಬಯಸುತ್ತಿದ್ದಾರೆ. ನಿಷ್ಟೆ ಬದಲಿಸಿದವರಲ್ಲಿ ರಾಜತಾಂತ್ರಿಕರು, ಸರಕಾರಿ ಸಿಬಂದಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News