ಇರಾಕ್ ಸೇನಾ ನೆಲೆಯಲ್ಲಿ ಸ್ಫೋಟ | 1 ಸಾವು, 20 ಮಂದಿಗೆ ಗಾಯ
ಬಗ್ದಾದ್: ಇರಾಕ್ನಲ್ಲಿ ಇರಾನ್ನೊಂದಿಗೆ ನಂಟು ಹೊಂದಿರುವ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಮ್ಎಫ್) ಎಂಬ ಸೇನಾ ಪಡೆ ಬಳಸುವ ಇರಾಕ್ ನ ಸೇನಾ ನೆಲೆಯೊಂದರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಇರಾಕ್ ರಾಜಧಾನಿ ಬಗ್ದಾದ್ನಿಂದ ಸುಮಾರು 50 ಕಿ.ಮೀ. ದೂರದಲ್ಲಿ, ಬಬಿಲ್ (ಬ್ಯಾಬಿಲೋನ್) ಪ್ರಾಂತದಲ್ಲಿರುವ ಕಲ್ಸು ಸೇನಾ ನೆಲೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಪಿಎಮ್ಎಫ್ ತಿಳಿಸಿದೆ.
ಸೇನಾ ನೆಲೆಯಲ್ಲಿ ಬೃಹತ್ ಸ್ಫೋಟವಾಗುವುದನ್ನು ವೀಡಿಯೊಗಳು ಮತ್ತು ಚಿತ್ರಗಳು ತೋರಿಸಿವೆ. ಸ್ಫೋಟದಿಂದಾಗಿ ಸುತ್ತಲಿನ ಸ್ಥಳದ ಮರಗಳು ಹೊತ್ತಿ ಉರಿದಿವೆ. ಸೇನಾ ನೆಲೆಯ ಒಳಗೆ ಬೃಹತ್ ಹೊಂಡವಾಗಿರುವುದನ್ನು ಮತ್ತು ಮೂಲಸೌಕರ್ಯಗಳು ಮತ್ತು ವಾಹನಗಳಿಗೆ ಹಾನಿಯಾಗಿರುವುದನ್ನೂ ಚಿತ್ರಗಳು ತೋರಿಸಿವೆ.
‘‘ಕಲ್ಸೊ ಸೇನಾ ನೆಲೆಯ ಮೇಲೆ ನಡೆದ ಆಕ್ರಮಣದ ಹಿಂದೆ ಅಮೆರಿಕವಿದೆ’’ ಎಂದು ಹೇಳಿಕೆಯೊಂದರಲ್ಲಿ ಪಿಎಮ್ಎಫ್ ತಿಳಿಸಿದೆ.
ಸ್ಫೋಟದ ವೇಳೆ ಅಥವಾ ಅದಕ್ಕಿಂತ ಮೊದಲು ಬಬಿಲ್ನ ವಾಯು ಪ್ರದೇಶದಲ್ಲಿ ಯಾವುದೇ ಡ್ರೋನ್ಗಳು ಅಥವಾ ಯುದ್ಧ ವಿಮಾನಗಳು ಪತ್ತೆಯಾಗಿಲ್ಲ ಎಂದು ಇರಾಕ್ ಸೇನೆ ಶನಿವಾರ ತಿಳಿಸಿದೆ. ಸ್ಫೋಟದಲ್ಲಿ ಓರ್ವ ಪಿಎಮ್ಎಫ್ ಸದಸ್ಯ ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆಯ ಹೇಳಿಕೆಯೊಂದು ತಿಳಿಸಿದೆ.
ಇರಾಕ್ನಲ್ಲಿ ನಡೆದ ವಾಯು ದಾಳಿಯ ಹಿಂದೆ ತಾನಿದ್ದೇನೆ ಎಂಬ ವರದಿಗಳನ್ನು ಅಮೆರಿಕ ಸೇನೆ ನಿರಾಕರಿಸಿದೆ.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಇರಾಕ್ ಸರಕಾರ ತಿಳಿಸಿದೆ. ಇರಾಕ್ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ ಪ್ರಸಕ್ತ ಅಮೆರಿಕದಲ್ಲಿದ್ದಾರೆ.
ಅಮೆರಿಕದ ನೇತೃತ್ವದಲ್ಲಿ ಇರಾಕ್ ಮೇಲೆ ದಾಳಿ ನಡೆದಾಗ ಕಲ್ಸು ಸೇನಾ ನೆಲೆಯು ಅಮೆರಿಕದ ಸೈನಿಕರ ನಿಯಂತ್ರಣದಲ್ಲಿತ್ತು ಎಂದು ‘ಅಲ್ ಜಝೀರ’ದ ಬಗ್ದಾದ್ ವರದಿಗಾರ ಮಹ್ಮೂದ್ ಅಬ್ದುಲ್ವಹೀದ್ ಹೇಳಿದ್ದಾರೆ. ಅದನ್ನು 2011ರಲ್ಲಿ ಇರಾಕ್ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿತ್ತು.
‘‘ಎಲ್ಲಾ ಬೆರಳುಗಳು ಇಸ್ರೇಲ್ನತ್ತ ಬೆಟ್ಟು ಮಾಡುತ್ತಿವೆ. ಈ ದಾಳಿಯನ್ನು ಇಸ್ರೇಲ್ ಮಾಡಿದೆ ಎಂಬುದಾಗಿ ಆರೋಪಿಸಲಾಗುತ್ತಿದೆ’’ ಎಂದು ಅವರು ಹೇಳಿದರು. ಆದರೆ, ಇಸ್ರೇಲ್ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.