ಸಿಇಒ ಸ್ಯಾಮ್ ಆಲ್ಟ್‌ಮನ್‌ರನ್ನು ವಜಾಗೊಳಿಸಿದ OpenAI
ವಾಷಿಂಗ್ಟನ್: ಕಂಪನಿಯ ಸಿಇಒ ಸ್ಯಾಮ್ ಆಲ್ಟ್‌ಮನ್‌ರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಆಡಳಿತ ಮಂಡಳಿಯು ಅವರಲ್ಲಿ ವಿಶ್ವಾಸ ಕಳೆದುಕೊಂಡಿದೆ ಎಂದು ಕಳೆದ ವರ್ಷ ಚಾಟ್ ಜಿಪಿಟಿಯನ್ನು ಸೃಷ್ಟಿಸಿದ್ದ, ಮೈಕ್ರೊಸಾಫ್ಟ್ ಬೆಂಬಲಿತ ಸಂಸ್ಥೆ OpenAI ಪ್ರಕಟಿಸಿದೆ.
ಮನುಷ್ಯನಂತೆಯೇ ಕೆಲವೇ ಕ್ಷಣಗಳಲ್ಲಿ ಪದ್ಯ ಹಾಗೂ ಚಿತ್ರಗಳನ್ನು ಬರೆಯುವ ವಿಶೇಷ ಸಾಮರ್ಥ್ಯ ಹೊಂದಿರುವ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯನ್ನು ಬಿಡುಗಡೆ ಮಾಡುವ ಮೂಲಕ 38 ವರ್ಷದ ಸ್ಯಾಮ್ ಆಲ್ಟ್‌ಮನ್ ವಿಶ್ವಾದ್ಯಂತ ಸಂಚಲನ ಮೂಡಿಸಿದ್ದರು.
ಸ್ಯಾಮ್ ಆಲ್ಟ್‌ಮನ್ ವಜಾಗೊಂಡಿರುವ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ OpenAI, "ಈ ಕ್ರಮವು ಅನಿವಾರ್ಯ ಪರಾಮರ್ಶೆಯ ನಂತರ ನಡೆದಿದ್ದು, ಅವರು ಆಡಳಿತ ಮಂಡಳಿಯೊಂದಿಗೆ ಸೂಕ್ತ ಸಂವಹನ ನಡೆಸುತ್ತಿರಲಿಲ್ಲ. ಆ ಮೂಲಕ ಆಡಳಿತ ಮಂಡಳಿಯು ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ತೊಡಕುಂಟು ಮಾಡುತ್ತಿದ್ದರು" ಎಂದು ಆರೋಪಿಸಿದೆ.
ಸ್ಯಾಮ್ ಆಲ್ಟ್‌ಮನ್ ಬದಲು ಸಂಸ್ಥೆಯ ಮುಖ್ಯ ತಂತ್ರಜ್ಞೆಯಾದ ಮೀರಾ ಮುರತಿ ಮಧ್ಯಾವಧಿಗೆ ನೇಮಕವಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು AFP ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸ್ಯಾಮ್ ಆಲ್ಟ್‌ಮನ್, ಜನರು ಕೃತಕ ಬುದ್ಧಿಮತ್ತೆ (AI) ಹಾಗೂ ಅದರ ಹಾನಿಕಾರಕ ಶಕ್ತಿಯ ಬಗ್ಗೆ ಕಳವಳಗೊಂಡಿದ್ದಾರೆ. ಆದರೆ, ಹಾಗೆ ಭಾವಿಸುವವರ ಬಗ್ಗೆ ನನಗೆ ಸಾಕಷ್ಟು ಕನಿಕರವಿದೆ" ಎಂದು ಹೇಳಿದ್ದಾರೆ.