ಉಕ್ರೇನ್ ವಿರುದ್ಧ ಮಾರಕ ಅಸ್ತ್ರ ಬಳಸಲು ರಶ್ಯದ ಯೋಜನೆ; ʼಆಪರೇಷನ್ ಫಾಲ್ಸ್ ಟಾರ್ಗೆಟ್'ಗೆ ಸಿದ್ಧತೆ
ಕೀವ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೊಸ ಮಾರಕ ಆಯುಧವನ್ನು ರಶ್ಯದ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದ್ದು ಇದನ್ನು ಡಿಕಾಯ್ ಡ್ರೋನ್‍ಗಳ ಜತೆ ಬೆರೆಸಿ ದಾಳಿ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ತನಿಖಾ ವರದಿ ಬಹಿರಂಗಪಡಿಸಿದೆ.
ಹೆಚ್ಚು ವಿನಾಶಕಾರಿ ಥರ್ಮೋಬಾರಿಕ್ ಡ್ರೋನ್‍ಗಳನ್ನು ಅಗ್ಗದ ಡಿಕೋಯ್ ಡ್ರೋನ್‍ಗಳ ಸಮೂಹದ ನಡುವೆ ಶತ್ರುವಿನ ಗುರಿಯತ್ತ ರವಾನಿಸುವುದು ರಶ್ಯದ ಯೋಜನೆಯಾಗಿದೆ. ಜೀವಗಳನ್ನು ಉಳಿಸಲು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸಲು ದುಬಾರಿ ವಾಯುರಕ್ಷಣಾ ವ್ಯವಸ್ಥೆ, ಯುದ್ಧಸಾಮಾಗ್ರಿಗಳ ಖರೀದಿಗೆ ಉಕ್ರೇನ್ ತನ್ನ ವಿರಳ ಸಂಪನ್ಮೂಲಗಳನ್ನು ವ್ಯಯಿಸುವಂತೆ ಒತ್ತಡ ಹೇರುವುದು ರಶ್ಯದ ಉದ್ದೇಶವಾಗಿದೆ ಎಂದು ವರದಿ ಹೇಳಿದೆ.
ಡಿಕಾಯ್ ಎಂಬುದು ಕಡಿಮೆ ವೆಚ್ಚದ, ಲಘು ಡ್ರೋನ್ ಆಗಿದ್ದು ಶತ್ರುಗಳ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಮೋಸಗೊಳಿಸುವ ಜತೆಗೆ ಯುದ್ಧವಿಮಾನಗಳು ಹಾಗೂ ಪೈಲಟ್‍ಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಈ ವಿಮಾನವು ಅಮೆರಿಕ ಹಾಗೂ ಅದರ ಮಿತ್ರದೇಶಗಳ ಯುದ್ಧವಿಮಾನಗಳ ಶೈಲಿ ಮತ್ತು ವಿನ್ಯಾಸವನ್ನು ನಕಲು ಮಾಡುತ್ತವೆ. ನೇರ ಪ್ರಸಾರದ ಕ್ಯಾಮೆರಾಗಳನ್ನು ಹೊಂದಿರುವ ಡಿಕಾಯ್ ಡ್ರೋನ್‍ಗಳು ಉಕ್ರೇನ್‍ನ ವಾಯುರಕ್ಷಣಾ ವ್ಯವಸ್ಥೆಯ ಭೌಗೋಳಿಕ ಸ್ಥಳದ ಬಗ್ಗೆ ಮತ್ತು ತನ್ನ (ಡಿಕಾಯ್ ಡ್ರೋನ್)ನ ಅಂತಿಮ ಕ್ಷಣದ ಬಗ್ಗೆ ರಶ್ಯಕ್ಕೆ ಮಾಹಿತಿಯನ್ನು ರವಾನಿಸುತ್ತದೆ.
ಮಧ್ಯ ರಶ್ಯದಲ್ಲಿರುವ ಅತ್ಯಾಧುನಿಕ ಕಾರ್ಖಾನೆಯು ಡ್ರೋನ್‍ಗಳನ್ನು ತಯಾರಿಸುತ್ತಿದೆ. ʼಆಪರೇಷನ್ ಫಾಲ್ಸ್ ಟಾರ್ಗೆಟ್' ಎಂದು ಹೆಸರಿಸಲಾದ ಈ ಯೋಜನೆಯ ಪ್ರಕಾರ ರೇಡಾರ್ ಗಳಿಂದ ಅಥವಾ ಶಾರ್ಪ್‍ಶೂಟರ್ ಗಳಿಂದ ಪತ್ತೆಹಚ್ಚಲು ಸಾಧ್ಯವಾಗದ ಡಿಕೋಯ್‍ಗಳ ಜತೆಗೆ ಸ್ಫೋಟಕ ಡ್ರೋನ್‍ಗಳನ್ನು ಉಕ್ರೇನ್ ವಿರುದ್ಧ ಬಳಸಲಾಗುವುದು ಎಂದು ಎಪಿ ಸುದ್ದಿಸಂಸ್ಥೆಯ ತನಿಖಾ ವರದಿ ಹೇಳಿದೆ.
ರಶ್ಯದ ಅಲಾಬುಗ ವಿಶೇಷ ಆರ್ಥಿಕ ವಲಯದಲ್ಲಿರುವ ರಹಸ್ಯ ಫ್ಯಾಕ್ಟರಿಯು ಆಯುಧ ರಹಿತ ಡಿಕಾಯ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿದೆ. ಜತೆಗೆ ಥರ್ಮೋಬಾರಿಕ್ ಸಿಡಿತಲೆಗಳನ್ನು ಹೊಂದಿರುವ ಅತ್ಯಾಧುನಿಕ ಶಾಹೆಡ್ ಡ್ರೋನ್‍ಗಳ ಮಾರಣಾಂತಿಕ ಹೊಸ ಆವೃತ್ತಿಯನ್ನೂ ಉತ್ಪಾದಿಸುತ್ತಿದೆ. ಅಕ್ಟೋಬರ್ ನಲ್ಲಿ ರಶ್ಯವು ಉಕ್ರೇನ್ ವಿರುದ್ಧ ಕನಿಷ್ಟ 1,899 ಡ್ರೋನ್‍ಗಳನ್ನು ಪ್ರಯೋಗಿಸಿದೆ. ಕಳೆದ ಶನಿವಾರ ಒಂದೇ ದಿನ 145 ಡ್ರೋನ್‍ಗಳನ್ನು ಪ್ರಯೋಗಿಸಿದೆ. ಇದರಲ್ಲಿ ಕೇವಲ 6%ದಷ್ಟು ಮಾತ್ರ ನಿಯೋಜಿತ ಗುರಿಗೆ ಅಪ್ಪಳಿಸಿದೆ. ಸರಣಿ ಡ್ರೋನ್ ದಾಳಿಗಳ ಮೂಲಕ ಉಕ್ರೇನ್ ಪಡೆಯನ್ನು ವಿಚಲಿತಗೊಳಿಸುವುದು ರಶ್ಯದ ತಂತ್ರಗಾರಿಕೆಯಾಗಿದೆ ಎಂದು ವರದಿ ಹೇಳಿದೆ.
ಭದ್ರಕೋಟೆಯ ಕಟ್ಟಡಗಳ ಒಳಗೆ ಅಥವಾ ಭೂಗತ ಗುರಿಗಳನ್ನು ಹೊಡೆಯಲು ಥರ್ಮೋಬಾರಿಕ್(ನಿರ್ವಾತ ಬಾಂಬ್‍ಗಳು) ಅಸ್ತ್ರಗಳು ಸೂಕ್ತವಾಗಿವೆ. ಇದು ಉತ್ಪಾದಿಸುವ ಹೆಚ್ಚಿನ ಶಾಖ ಮತ್ತು ಒತ್ತಡ ಅತೀ ದಪ್ಪದ ಗೋಡೆಯನ್ನೂ ಬೇಧಿಸಿ ಒಳನುಗ್ಗಲು ನೆರವಾಗುತ್ತದೆ. ಇದೇ ಸಮಯದಲ್ಲಿ ತಮ್ಮ ಹಾದಿಯಲ್ಲಿರುವ ಎಲ್ಲಾ ಆಮ್ಲಜನಕವನ್ನೂ ಇದು ಹೀರಿಕೊಳ್ಳುತ್ತದೆ. ಇದೀಗ ರಶ್ಯ ಉತ್ಪಾದಿಸಿರುವ ಥರ್ಮೋಬಾರಿಕ್ ಡ್ರೋನ್‍ಗಳು ಕಟ್ಟಡಕ್ಕೆ ಅಪ್ಪಳಿಸಿದಾಗ ಹೆಚ್ಚು ವಿನಾಶಕಾರಿಯಾಗುತ್ತವೆ. ಯಾಕೆಂದರೆ ಅವುಗಳು ಪ್ರಬಲ ಸ್ಫೋಟಕ್ಕಿಂತಲೂ ಅಧಿಕ ಹಾನಿಯುಂಟು ಮಾಡಲು ಬಾಲ್ ಬೇರಿಂಗ್‍ಗಳನ್ನು ಹೊಂದಿರುತ್ತವೆ ಎಂದು ವರದಿ ಹೇಳಿದೆ.
ನಿರ್ವಾತ ಬಾಂಬ್‍ಗಳು:
ಅಲಬುಗ ಫ್ಯಾಕ್ಟರಿಯಲ್ಲಿ ಈಗ ಪ್ರತೀ ದಿನ 40 ಡಿಕಾಯ್ ಡ್ರೋನ್‍ಗಳು ಹಾಗೂ 10 ಥರ್ಮೋಬಾರಿಕ್ ಡ್ರೋನ್‍ಗಳನ್ನು ಉತ್ಪಾದಿಸಲಾಗುತ್ತಿದೆ. ನಿರ್ವಾತ ಬಾಂಬ್‍ಗಳೆಂದೂ ಕರೆಯಲಾಗುವ ಥರ್ಮೋಬಾರಿಕ್ ಸಿಡಿತಲೆ ಸ್ಫೋಟಗೊಂಡ ಸ್ಥಳದ ಹೊರಗೆ ಸಿಕ್ಕಿಬಿದ್ದ ಜನರ ಮೇಲೆ ಸಹ ದೈಹಿಕ ಪರಿಣಾಮ ಉಂಟಾಗುತ್ತದೆ. ಶ್ವಾಸಕೋಶಕ್ಕೆ ಹಾನಿ, ಕಣ್ಣಿನ ಗುಡ್ಡೆಗಳಿಗೆ ಹಾನಿ ಹಾಗೂ ಮೆದುಳಿಗೆ ಹಾನಿಯಾಗುತ್ತದೆ ಎಂದು ವರದಿ ಹೇಳಿದೆ.
ಪುಟಿನ್‍ಗೆ ಜರ್ಮನ್ ಛಾನ್ಸಲರ್ ಕರೆ: ಉಕ್ರೇನ್ ಅಧ್ಯಕ್ಷರ ಆಕ್ಷೇಪ
ಉಕ್ರೇನ್ ಜತೆ ಕದನ ವಿರಾಮ ಮಾತುಕತೆ ನಡೆಸುವಂತೆ ಜರ್ಮನ್ ಛಾನ್ಸಲರ್ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರನ್ನು ಶುಕ್ರವಾರ ಆಗ್ರಹಿಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಈ ರೀತಿಯ ಓಲೈಕೆ ಕೃತ್ಯಗಳನ್ನು ನಮ್ಮ ದೌರ್ಬಲ್ಯವೆಂದು ರಶ್ಯ ಭಾವಿಸಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪುಟಿನ್‍ಗೆ ಕರೆ ಮಾಡಿದ್ದ ಜರ್ಮನ್ ಛಾನ್ಸಲರ್ ರಶ್ಯದ ಆಕ್ರಮಣವನ್ನು ಖಂಡಿಸಿದರು ಮತ್ತು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಉಕ್ರೇನ್ ಜತೆ ಕದನ ವಿರಾಮ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದಾರೆ ಎಂದು ಜರ್ಮನ್ ಸರಕಾರದ ಮೂಲಗಳು ಹೇಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಝೆಲೆನ್‍ಸ್ಕಿ `ಕೇವಲ ಮಾತುಕತೆಯಿಂದ ಏನನ್ನೂ ಸಾಧಿಸಲಾಗದು. ಇದನ್ನು ಓಲೈಕೆ ಕ್ರಮ ಮತ್ತು ನಮ್ಮ ದೌರ್ಬಲ್ಯವೆಂದು ಪುಟಿನ್ ಭಾವಿಸಬಹುದು' ಎಂದು ಟೀಕಿಸಿದ್ದಾರೆ.