ನಮ್ಮ ಯುದ್ಧತಂತ್ರದ ಯೋಜನೆ ರಶ್ಯಕ್ಕೆ ಸೋರಿಕೆಯಾಗಿದೆ: ಉಕ್ರೇನ್
ಕೀವ್ : ಕಳೆದ ವರ್ಷ ಉಕ್ರೇನ್‍ನ ಬಹುನಿರೀಕ್ಷಿತ ಪ್ರತಿದಾಳಿಯ ಯೋಜನೆಗಳು ಮುಂಚಿತವಾಗಿಯೇ ರಶ್ಯಕ್ಕೆ ಸೋರಿಕೆಯಾಗಿತ್ತು. ನಮ್ಮ ಪ್ರತಿದಾಳಿ ಆರಂಭವಾಗುವ ಮೊದಲೇ ಇದರ ವಿವರಗಳು ರಶ್ಯ ರಕ್ಷಣಾ ಪಡೆಯ ಕೈಸೇರಿತ್ತು ಎಂದು ಉಕ್ರೇನ್‍ನ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.
ಪಾಶ್ಚಿಮಾತ್ಯರ ಬಹುಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳ ಬಲ ಪಡೆದ ಉಕ್ರೇನ್‍ನ 2023ರ ಪ್ರತಿದಾಳಿಯು ಬಹುತೇಕ ವಿಫಲವಾಗಿತ್ತು ಮತ್ತು ರಶ್ಯದ ಮುಂಚೂಣಿ ನೆಲೆಯ ಮೇಲೆ ನಿರೀಕ್ಷಿತ ಮಟ್ಟದ ಹಾನಿ ಎಸಗಲು ಸಾಧ್ಯವಾಗಿರಲಿಲ್ಲ. ಉಕ್ರೇನ್‍ನ ಮಿಲಿಟರಿ ಯೋಜನೆಯ ಮಾಹಿತಿಯನ್ನು ರಶ್ಯದ ಗುಪ್ತಚರ ಇಲಾಖೆ ಪಡೆದುಕೊಂಡಿದೆ ಎಂದು ಉಕ್ರೇನ್ ಸೇನಾಧಿಕಾರಿಗಳು ಹಲವು ಬಾರಿ ಆರೋಪಿಸಿದ್ದರು.
2024ರಲ್ಲಿ ನಾವು ಪ್ರತಿದಾಳಿಯ ಬಗ್ಗೆ ಹಲವು ಯೋಜನೆ ರೂಪಿಸಿದ್ದೇವೆ. ಆದರೆ ಕಳೆದ ವರ್ಷದ ಪ್ರಮಾದದಿಂದ ಪಾಠ ಕಲಿತಿದ್ದು ಈ ವರ್ಷದ ಯೋಜನೆಯಲ್ಲಿ ಯಾವುದನ್ನು ಅಂತಿಮಗೊಳಿಸಲಿದ್ದೇವೆ ಎಂಬುದನ್ನು ಅಂತಿಮ ಕ್ಷಣದಲ್ಲಿ ನಿರ್ಧರಿಸಲಾಗುವುದು ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ. ಉಕ್ರೇನ್‍ಗೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಶಸ್ತ್ರಾಸ್ತ್ರ ಪೂರೈಕೆ ವಿಳಂಬಗೊಂಡಿರುವ ಬೆನ್ನಲ್ಲೇ ರಶ್ಯದ ಪಡೆ ಉಕ್ರೇನ್‍ನ ಆಯಕಟ್ಟಿನ ನಗರ ಅವ್ಡಿವ್ಕಾವನ್ನು ವಶಪಡಿಸಿಕೊಂಡಿವೆ.