ಪಾಕಿಸ್ತಾನ: ಸರಕಾರ ರಚನೆ ಕಸರತ್ತು ಆರಂಭ

Update: 2024-02-12 16:29 GMT

  ಇಮ್ರಾನ್‍ಖಾನ್, ನವಾಝ್ ಷರೀಫ್ | Photo : NDTV 

ಇಸ್ಲಮಾಬಾದ್: ಫೆಬ್ರವರಿ 8ರ ಯಾವುದೇ ಪಕ್ಷವು ಸರಳ ಬಹುಮತವನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರ ರಚಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಪಿಪಿಪಿ ಪಕ್ಷಗಳ ನಡುವೆ ಮಾತುಕತೆ ಮುಂದುವರಿದಿದೆ.

ಚುನಾವಣಾ ಆಯೋಗ ಘೋಷಿಸಿರುವ ಫಲಿತಾಂಶದ ಪ್ರಕಾರ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು 101, ಪಿಎಂಎಲ್-ಎನ್ ಪಕ್ಷ 75 ಮತ್ತು ಪಿಪಿಪಿ ಪಕ್ಷ 54 ಸ್ಥಾನಗಳಲ್ಲಿ ಗೆಲುವು ಪಡೆದಿದೆ.    

ಪಿಪಿಪಿ ಪಾಕಿಸ್ತಾನದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಟ್ರಂಪ್ ಕಾರ್ಡ್ ಎನಿಸಿಕೊಂಡಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಸೋಮವಾರ ತಡರಾತ್ರಿ ನಡೆಯುವ ಪಿಪಿಪಿ ಕೇಂದ್ರ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಿಎಂಎಲ್-ಎನ್ ಪಕ್ಷ ಮುಂದಿರಿಸಿರುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಯಲಿದೆ. ಈ ಮಧ್ಯೆ, ಪಿಎಂಎಲ್-ಎನ್ ಪಕ್ಷ ಇಸ್ಲಮಾಬಾದ್‍ನಲ್ಲಿ ಇತರ ಪಕ್ಷಗಳ ಜತೆಯೂ ಸಭೆ ನಡೆಸಿದೆ ಎಂದು ವರದಿಯಾಗಿದೆ.

ಸಭೆಯಲ್ಲಿ ಚರ್ಚಿಸಲಾದ ಸೂತ್ರದ ಪ್ರಕಾರ, ಪಿಎಂಎಲ್-ಎನ್ ಪಕ್ಷದ ಶಹಬಾಝ್ ಷರೀಫ್ ಪ್ರಧಾನಿಯಾಗಲಿದ್ದು ಪಿಪಿಪಿ ಪಕ್ಷಕ್ಕೆ ಅಧ್ಯಕ್ಷ ಹುದ್ದೆಯ ಜತೆಗೆ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಸ್ಥಾನ, ಬಲೂಚಿಸ್ತಾನ ಪ್ರಾಂತದಲ್ಲಿ ಸರಕಾರ ರಚನೆಗೆ ಅವಕಾಶ ದೊರಕಲಿದೆ. ಮೂಲಗಳ ಪ್ರಕಾರ, ಪಿಪಿಪಿ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ತನ್ನ ಸಹೋದರಿ ಫರ್ಯಾಲ್ ತಾಲ್ಪುರ್ ಪಾಕಿಸ್ತಾನದ ಪ್ರಥಮ ಮಹಿಳಾ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ, ಪಕ್ಷೇತರ ಅಭ್ಯರ್ಥಿಯಾಗಿ ಪಿಟಿಐ ಪಕ್ಷದ ಬೆಂಬಲದಿಂದ ಸ್ಪರ್ಧಿಸಿ ಆಯ್ಕೆಗೊಂಡಿದ್ದ ವಾಸಿಮ್ ಖಾದಿರ್ ತಾನು ಪಿಎಂಎಲ್-ಎನ್ ಪಕ್ಷ ಸೇರುವುದಾಗಿ ಘೋಷಿಸಿದ್ದಾರೆ. ತನ್ನ ಕ್ಷೇತ್ರದ ಜನತೆಯ ಪರವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಪಿಟಿಐ ಪಕ್ಷದ ಲಾಹೋರ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಖಾದಿರ್ ಹೇಳಿದ್ದಾರೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಕ್ಷೇತರ ಸಂಸದರು ಸರಕಾರ ರಚಿಸುವಂತಿಲ್ಲ. ಆದರೆ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು. ಪಕ್ಷೇತರ ಸಂಸದರು ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಫೆಬ್ರವರಿ 13 ಅಂತಿಮ ದಿನವಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News