ಫೆಲೆಸ್ತೀನ್ ಪ್ರಾಂತಗಳಲ್ಲಿ ಬಡತನದ ಪ್ರಮಾಣ ದ್ವಿಗುಣ : ವಿಶ್ವಸಂಸ್ಥೆ ವರದಿ
ಜಿನೆವಾ : ಫೆಲೆಸ್ತೀನ್ ಪ್ರಾಂತಗಳಾದ್ಯಂತ ಬಡತನದ ಪ್ರಮಾಣವು ಈ ವರ್ಷ ಗಾಝಾದಲ್ಲಿನ ಯುದ್ಧದ ಬಳಿಕ ಬಹುತೇಕ ದ್ವಿಗುಣಗೊಂಡಿದ್ದು 74.3%ಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ(ಯುಎನ್‍ಡಿಪಿ) ಮಂಗಳವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.
ಯುದ್ಧದ ತಕ್ಷಣದ ಪರಿಣಾಮವು, ಕೇವಲ ಭೌತಿಕ ಮೂಲಸೌಕರ್ಯಗಳ ವಿನಾಶ ಮಾತ್ರವಲ್ಲದೆ ಬಡತನ, ಜೀವನೋಪಾಯ ಮತ್ತು ಜೀವನೋಪಾಯದ ನಷ್ಟದ ದೃಷ್ಟಿಯಿಂದಲೂ ಅಗಾಧವಾಗಿದೆ ಎಂದು ಯುಎನ್‍ಡಿಪಿ ಮುಖ್ಯಸ್ಥ ಅಚಿಮ್ ಸ್ಟೈನರ್ ಹೇಳಿದ್ದಾರೆ. 2023ರ ಅಂತ್ಯದಲ್ಲಿ ಬಡತನದ ಪ್ರಮಾಣ 38.8%ದಷ್ಟಿತ್ತು. ಈ ವರ್ಷ ಮತ್ತೆ 2.61 ದಶಲಕ್ಷ ಫೆಲೆಸ್ತೀನೀಯರು ಬಡತನದ ವ್ಯಾಪ್ತಿಗೆ ಜಾರಿದ್ದು ಬಡತನದ ವ್ಯಾಪ್ತಿಯಲ್ಲಿರುವ ಜನರ ಸಂಖ್ಯೆ 4.1 ದಶಲಕ್ಷಕ್ಕೆ ತಲುಪಿದೆ. ವಿನಾಶದ ಮಟ್ಟವು ಫೆಲೆಸ್ತೀನ್ ಪ್ರದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಹಲವು ವರ್ಷಗಳಷ್ಟು ಹಿಂದಕ್ಕೆ ಸರಿಸಿರುವುದು ಸ್ಪಷ್ಟವಾಗಿದೆ. ಪ್ರತೀ ವರ್ಷ ಮಾನವೀಯ ನೆರವು ನೀಡಿದರೂ ಸಹ, ಫೆಲೆಸ್ತೀನ್ ಆರ್ಥಿಕತೆ ಬಿಕ್ಕಟ್ಟು ಪೂರ್ವದ ಸ್ಥಿತಿಗೆ ತಲುಪಿ ಇನ್ನೂ ಒಂದು ದಶಕ ಅಥವಾ ಹೆಚ್ಚಿನ ಅವಧಿ ಬೇಕಾಗಬಹುದು. ಚೇತರಿಸಿಕೊಳ್ಳಲು ಉಸಿರುಗಟ್ಟಿಸುವ ಆರ್ಥಿಕ ಪರಿಸ್ಥಿತಿಗಳನ್ನು ಮೇಲಕ್ಕೆತ್ತುವ ಅಗತ್ಯವಿದೆ ಎಂದು ಅಚಿಮ್ ಸ್ಟೈನರ್ ಹೇಳಿದ್ದಾರೆ.
ಈ ವರ್ಷ ಫೆಲೆಸ್ತೀನ್ ಪ್ರಾಂತಗಳಲ್ಲಿ ನಿರುದ್ಯೋಗ 49.9%ಕ್ಕೆ ಏರಬಹುದು ಮತ್ತು ಜಿಡಿಪಿಯು ಯುದ್ಧ ಆರಂಭಕ್ಕೂ ಹಿಂದಿನ ಗಾಝಾಕ್ಕಿಂತ 35.1% ಕಡಿಮೆಯಾಗಿರಲಿದೆ. ಇಸ್ರೇಲ್‍ನ ನಿರಂತರ ಬಾಂಬ್ ದಾಳಿಯ ಕಾರ್ಯಾಚರಣೆಯು ಗಾಝಾದಲ್ಲಿ 42 ದಶಲಕ್ಷ ಟನ್‍ಗಳಷ್ಟು ಕಲ್ಲು ಮಣ್ಣುಗಳನ್ನು ಸೃಷ್ಟಿಸಿದ್ದು ಇದು ಪ್ರಮುಖ ಆರೋಗ್ಯ ಅಪಾಯಕ್ಕೆ ಕಾರಣವಾಗಿದೆ ಎಂದು ಅಧ್ಯಯನವು ಹೇಳಿದೆ.