“ಫೆಲೆಸ್ತೀನ್ ಮಕ್ಕಳು ನಕಲಿ ಗಾಯಗಳನ್ನು ಪ್ರದರ್ಶಿಸುತ್ತಿದ್ದಾರೆ” ಎಂದ ಇಸ್ರೇಲ್ ರಾಯಭಾರಿ!

Update: 2023-11-10 14:29 GMT

ಹೊಸದಿಲ್ಲಿ: ಇಸ್ರೇಲ್ ದಬ್ಬಾಳಿಕೆ ನಡೆಸುತ್ತಿದೆ ಎಂದು ಬಿಂಬಿಸಲು ಫೆಲೆಸ್ತೀನ್ ಮಕ್ಕಳು ನಕಲಿ ಗಾಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ತಪ್ಪಾಗಿ ಆರೋಪಿಸಿರುವ ವೀಡಿಯೊವನ್ನು x ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮುಂಬೈನಲ್ಲಿನ ಮಧ್ಯಪಶ್ಚಿಮ ಭಾರತಕ್ಕೆ ಇಸ್ರೇಲ್ ನ ಪ್ರಧಾನ ರಾಯಭಾರಿಯಾಗಿರುವ ಕೊಬ್ಬಿ ಶೋಶನಿ ವಿವಾದಕ್ಕೆ ಕಾರಣವಾಗಿದ್ದಾರೆ.

“ಬಾಲಿವುಡ್, ನಿಮಗೆ ಗಾಝಾದಲ್ಲಿ ನಕಲಿ ಸ್ಪರ್ಧೆಯಿದೆ” ಎಂಬ ಶೀರ್ಷಿಕೆಯೊಂದಿಗೆ ಶೋಶನಿ ಹಂಚಿಕೊಂಡಿರುವ ಪೋಸ್ಟ್ ದಾರಿ ತಪ್ಪಿಸುವಂಥದು ಎಂದು x ಸಾಮಾಜಿಕ ಮಾಧ್ಯಮ ವೇದಿಕೆಯು ಆಕ್ಷೇಪಿಸಿದೆ. ಆ ವೀಡಿಯೊದಲ್ಲಿ ರೆಡ್ ಕ್ರೆಸೆಂಟ್ ಕಾರ್ಯಕರ್ತರು ಬಾಲಕಿಯೊಬ್ಬಳನ್ನು ರಕ್ಷಿಸುತ್ತಿದ್ದು, ಇತರರು ಕ್ಯಾಮೆರಾ ಹಿಡಿದುಕೊಂಡಿರುತ್ತಾರೆ. ಸಿನಿಮಾ ಚಿತ್ರೀಕರಣದಂತೆ ಕಾಣುವ ಈ ವೀಡಿಯೊವನ್ನು ಫೆಲಸ್ತೀನಿಗೆ ಹೋಲಿಸಿ ನಕಲಿ ಎಂದು ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ಹಂಚಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ದೃಶ್ಯಾವಳಿಯು ಲೆಬನನ್ ನ ಕಿರುಚಿತ್ರದ ಶೂಟಿಂಗ್ ಸಂದರ್ಭದ್ದು!

ಈ ದಾರಿ ತಪ್ಪಿಸುವ ವೀಡಿಯೊ ಕಾರಣಕ್ಕೆ, “ಈ ವೀಡಿಯೊ ಲೆಬನಾನ್ ಕಿರುಚಿತ್ರವೊಂದರ ದೃಶ್ಯದ ಹಿಂದಿನ ದೃಶ್ಯವಾಗಿದೆ. ಈ ವೀಡಿಯೊ ಇಸ್ರೇಲ್ ವಿರುದ್ಧ ಮಾಧ್ಯಮಗಳಿಗೆ ಆಹಾರ ಒದಗಿಸಲು ಫೆಲೆಸ್ತೀನ್ ಸಂತ್ರಸ್ತೆಯನ್ನು ಸೋಗಿನ ಮೂಲಕ ಪ್ರದರ್ಶಿಸಿಲ್ಲ. ಬದಲಿಗೆ ಇದು ಫೆಲೆಸ್ತೀನ್ ಬೇಡಿಕೆಯ ಪರವಾಗಿ ಲೆಬನಾನ್ ನಲ್ಲಿ ಚಿತ್ರೀಕರಿಸಿರುವ ಕಿರು ಚಿತ್ರವಾಗಿದೆ” ಎಂದು x ಸಾಮಾಜಿಕ ಮಾಧ‍್ಯಮ ವೇದಿಕೆಯು ಈ ವೀಡಿಯೊದೊಂದಿಗೆ ಸಮಜಾಯಿಷಿ ಟಿಪ್ಪಣಿಯನ್ನು ಲಗತ್ತಿಸಬೇಕಾಗಿ ಬಂದಿದೆ.

ಫ್ಯಾಕ್ಟ್‌ ಚೆಕ್‌ ಮಾಡುವ ಹಾಗೂ ಆಲ್ಟ್ ನ್ಯೂಸ್ ಸುದ್ದಿ ಸಂಸ್ಥೆಯ ಸಹ ಸಂಸ್ಥಾಪಕ ಮುಹಮ್ಮದ್ ಝಬೇರ್ ಕೂಡಾ ಶೋಶನಿ ವೀಡಿಯೊದ ಅಸಲೀಯತ್ತನ್ನು ಬಹಿರಂಗಪಡಿಸಿ , ಇದು ನಕಲಿ ಸುದ್ದಿ ಎಂದು ಆರೋಪಿಸಿದ್ದಾರೆ. ಇದು ಫೆಲೆಸ್ತೀನ್ ಬೇಡಿಕೆಯ ಪರವಾಗಿ ಲೆಬನಾನ್ ಕಲಾವಿದರು ಗೌರವಪೂರ್ವಕವಾಗಿ ಚಿತ್ರೀಕರಿಸಿರುವ ವೀಡಿಯೊ ಆಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಇಸ್ರೇಲ್-ಫೆಲೆಸ್ತೀನ್ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ ಶೋಶನಿ ಇದೇ ಪ್ರಥಮ ಬಾರಿಯೇನು ವಿವಾದ ಸೃಷ್ಟಿಸುತ್ತಿಲ್ಲ. ಅಕ್ಟೋಬರ್ 7, 2023ರಿಂದಲೂ ಫೆಲೆಸ್ತೀನ್ ವಿರುದ್ಧ ದಾರಿ ತಪ್ಪಿಸುವ ತುಣುಕುಗಳನ್ನು ಹಂಚುವುದರಲ್ಲಿ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ತಮ್ಮನ್ನು ಶೋಶನಿ ತೊಡಗಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು , ಫೆಲೆಸ್ತೀನ್ ವಿರುದ್ಧ ಇಸ್ರೇಲ್ ಅಧಿಕಾರಿಗಳು ದಾರಿ ತಪ್ಪಿಸುವ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಹಮ್ಮದ್ ಝುಬೇರ್ ಬಯಲು ಮಾಡಿದಾಗ, ಅವರು ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಶೋಶನಿ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News