ಫೆಲೆಸ್ತೀನಿಯರಿಗೆ ಅವರ ತಾಯ್ನಾಡನ್ನು ನಿರಾಕರಿಸಲಾಗಿದೆ: ಜೈಶಂಕರ್ ಅಸಮಾಧಾನ
ಕೌಲಾಲಂಪುರ: ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿನ ಕುರಿತು ಗುರುವಾರ ತೀಕ್ಷ್ಣ ಹೇಳಿಕೆಯನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಈ ಸಂಘರ್ಷದಲ್ಲಿ ಸರಿ, ತಪ್ಪುಗಳೇನೇ ಇರಲಿ ಫೆಲೆಸ್ತೀನಿಯರಿಗೆ ಅವರ ಹಕ್ಕುಗಳನ್ನು ಹಾಗೂ ತಾಯ್ನಾಡನ್ನು ನಿರಾಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಆಕ್ಟೋಬರ್ 7ರಂದು ಇಸ್ರೇಲ್ ನೆಲದ ಮೇಲೆ ಹಮಾಸ್ ನಡೆಸಿದ ದಾಳಿಯು ‘ಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಝಾದ ಮೇಲೆ ಎಸಗಿದ ಪ್ರತಿದಾಳಿಯನ್ನು ಪ್ರಸ್ತಾವಿಸಿದ ಅವರು, ಪ್ರತಿಯೊಂದು ಪ್ರತಿಕ್ರಿಯೆಗೂ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಪ್ರತಿಪಾದಿಸಿದರು.
ಮಲೇಶ್ಯ ಪ್ರವಾಸದಲ್ಲಿರುವ ಜೈಶಂಕರ್ ಅವರು ಬುಧವಾರ ಕೌಲಾಲಂಪುರದಲ್ಲಿ ನಡೆ ಅನಿವಾಸಿ ‘ಭಾರತೀಯ ಸಮುದಾಯದ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
‘‘ ಒಂದೆಡೆ ಆಕ್ಟೋಬರ್ 7ರಂದು ಇಸ್ರೇಲ್ ನೆಲದಲ್ಲಿ ನಡೆದ ಘಟನೆಯು ಭಯೋತ್ಪಾದಕ ಕೃತ್ಯವಾಗಿದೆ. ಇನ್ನೊಂದೆಡೆ ಗಾಝಾದಲ್ಲಿ ಅಮಾಯಕ ನಾಗರಿಕರ ಸಾವನ್ನು ಯಾರೂ ಕೂಡಾ ಸಹಿಸಿಕೊಳ್ಳಲು ಸಾಧ್ಯಯವಿಲ್ಲ. ದೇಶಗಳು ಈ ಕೃತ್ಯವನ್ನು ಅವುಗಳ ಮನಸ್ಸಿಗೆ ತೋಚಿದ ರೀತಿಯಲ್ಲಿ ಸಮರ್ಥಿಸಿಕೊಳ್ಳಬುಹುದು. ಆದರೆ ಅದಕ್ಕೆ ಮುನ್ನ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಜೈಶಂಕರ್ ತಿಳಿಸಿದ್ದಾರೆ.
‘‘ಸರಿ ತಪ್ಪುಗಳು ಯಾವುದೇ ಇರಲಿ, ಫೆಲೆಸ್ತೀನಿಯರಿಗೆ ಅವರ ತಾಯ್ನಾಡನ್ನು ನಿರಾಕರಿಸಲಾಗುತ್ತಿದೆ ಎಂಬುದು ವಾಸ್ತವ’ ಎಂದವರು ಹೇಳಿದರು.
ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ಫೆಲೆಸ್ತೀನ್ ಬಿಕ್ಕಟ್ಟಿಗೆ ದ್ವಿರಾಷ್ಟ್ರ ಸಿದ್ಧಾಂತವೇ ಪರಿಹಾರವೆಂದು ‘ಭಾರತವು ಪ್ರತಿಪಾದಿಸುತ್ತಾ ಬಂದಿದೆ.
ಅಧಿಕೃತ ಮಲೇಶ್ಯ ಪ್ರವಾಸದ ಬಳಿಕ ಜೈಶಂಕರ್ ಅವರು ಸಿಂಗಾಪುರ ಹಾಗೂ ಫಿಲಿಪ್ಪೀನ್ಸ್ಗೂ ಭೇಟಿ ನೀಡಲಿದ್ದಾರೆ.
ಗುರುವಾರ ಬೆಳಗ್ಗೆ ಜೈಶಂಕರ್ ಅವರು ಮಲೇಶ್ಯ ಪ್ರಧಾನಿ ಅನ್ವರ್ ಇಬಾಹೀಂ ಅವರನ್ನು ಭೇಟಿಯಾದ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಉಪಕ್ರಮಗಳನ್ನು ಅಭಿನಂದಿಸಿದರು.