ಪಪುವಾ ನ್ಯೂಗಿನಿಯಾ: ಆಸ್ಟ್ರೇಲಿಯಾ ಪೈಲಟ್ ಸಹಿತ ಮೂವರ ಅಪಹರಣ
ಪೋರ್ಟ್ ಮೋರೆಸ್ಬಿ : ವಿಶ್ವದ ಮೂರನೇ ಅತೀದೊಡ್ಡ ದ್ವೀಪರಾಷ್ಟ್ರವಾಗಿರುವ ಪಪುವಾ ನ್ಯೂಗಿನಿಯಾದಲ್ಲಿ ಸೋಮವಾರ ಆಸ್ಟ್ರೇಲಿಯಾದ ಪೈಲಟ್ ಹಾಗೂ ಇತರ ಇಬ್ಬರು ಪ್ರಯಾಣಿಕರನ್ನು ಅಪಹರಿಸಲಾಗಿದ್ದು ಕೆಲ ಘಂಟೆಗಳ ಬಳಿಕ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೆಲಾ ಪ್ರಾಂತದ ಸಿಸಾ ಪರ್ವತದ ಬಳಿಯ ದೂರಸಂಪರ್ಕ ವ್ಯವಸ್ಥೆಯ ಪ್ರದೇಶದಲ್ಲಿ ಪೈಲಟ್ ಹಾಗೂ ಇಬ್ಬರು ಕೆಲಸಗಾರರಿದ್ದ ಹೆಲಿಕಾಪ್ಟರ್ ಭೂಸ್ಪರ್ಷ ಮಾಡಿತ್ತು. ಆಗ ಅಲ್ಲಿಗೆ ಬಂದ ಸಸಶ್ತ್ರಧಾರಿಗಳ ಗುಂಪು ಬಂದೂಕಿನಿಂದ ಬೆದರಿಸಿ ಅವರನ್ನು ಅಪಹರಿಸಿದೆ. ಮಾಹಿತಿ ತಿಳಿದ ಅಧಿಕಾರಿಗಳು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ಕೆಲ ಗಂಟೆಗಳ ಬಳಿಕ ಮೂವರನ್ನೂ ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡೇವಿಡ್ ಮ್ಯಾನಿಂಗ್ ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾದ ಪುರಾತತ್ವಶಾಸ್ತ್ರಜ್ಞ ಮತ್ತು ಇಬ್ಬರು ಸ್ಥಳೀಯ ಸಂಶೋಧಕರನ್ನು ಅಪಹರಿಸಿದ್ದ ಸಶಸ್ತ್ರ ಬಂದೂಕುಧಾರಿಗಳು ಭಾರೀ ಮೊತ್ತದ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದು ಒಂದು ವಾರಕ್ಕೂ ಅಧಿಕ ಸಮಯದ ಬಳಿಕ ಒತ್ತೆಹಣ ಪಡೆದು ಬಿಡುಗಡೆಗೊಳಿಸಿದ್ದರು.