ತೈವಾನ್ ಸಂಸತ್‍ನಲ್ಲಿ ಸಂಸದರ ಮಾರಾಮಾರಿ | ಮಸೂದೆ ಕಿತ್ತುಕೊಂಡು ಓಡಿದ ಸಂಸದ

Update: 2024-05-18 16:28 GMT

PC :X/@Lebona_cabonena

ತೈಪೆ: ಪ್ರಸ್ತಾವಿತ ಸಂಸತ್ ಸುಧಾರಣೆ ಮಸೂದೆಯ ಬಗ್ಗೆ ತೈವಾನ್‍ನ ಸಂಸದರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಒಂದು ಹಂತದಲ್ಲಿ ಸಂಸದರೊಬ್ಬರು ಮಸೂದೆಯ ಪ್ರತಿಯನ್ನು ಅಧಿಕಾರಿಗಳ ಕೈಯಿಂದ ಎಳೆದುಕೊಂಡು ಸದನದ ಹೊರಗೆ ಓಡಿಹೋದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚುನಾಯಿತ ಅಧ್ಯಕ್ಷ ಲಾಯ್ ಚಿಂಗ್‍ಟೆ ಶಾಸಕಾಂಗ ಬಹುಮತವಿಲ್ಲದೆ ಅಧಿಕಾರ ಸ್ವೀಕರಿಸುವ ಕೆಲವೇ ದಿನಗಳ ಮೊದಲು ತೈವಾನ್ ಸಂಸತ್ ಈ ಗದ್ದಲದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸರಕಾರದ ಮೇಲೆ ನಿಗಾ ವಹಿಸಲು ಸಂಸತ್‍ಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ವಿರೋಧ ಪಕ್ಷಗಳ ಉದ್ದೇಶವಾಗಿದೆ.

ಮಸೂದೆಯನ್ನು ಮತಕ್ಕೆ ಹಾಕುವುದಕ್ಕೂ ಮೊದಲೇ ಸದನದ ಹೊರಗೆ ಕೆಲವು ಸಂಸದರ ನಡುವೆ ವಾಗ್ಯುದ್ದ, ನೂಕಾಟ, ಪರಸ್ಪರರನ್ನು ಹಿಡಿದೆಳೆಯುವುದು ನಡೆದಿತ್ತು. ಬಳಿಕ ಸದನದ ಒಳಗೂ ಈ ಸನ್ನಿವೇಶ ಪುನರಾವರ್ತನೆಗೊಂಡಿದ್ದು ಸ್ಪೀಕರ್ ಆಸನದ ಸುತ್ತ ಸೇರಿದ ಕೆಲವು ಸಂಸದರು ಮಸೂದೆಯನ್ನು ವಿರೋಧಿಸಿ ಘೋಷಣೆ ಕೂಗಿದರೆ, ಇನ್ನು ಕೆಲವರು ಮೇಜಿನ ಮೇಲೇರಿ ಘೋಷಣೆ ಕೂಗುತ್ತಿದ್ದವರನ್ನು ಹಿಡಿದೆಳೆದರು. ಈ ಗದ್ದಲದಲ್ಲಿ ಕೆಲವರು ನೆಲಕ್ಕೆ ಬಿದ್ದರು.

ಹಲವಾರು ಸಂಸದರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಅಂತಿಮವಾಗಿ ಮಸೂದೆಯ ಕುರಿತ ಚರ್ಚೆಯನ್ನು ಮೇ 21ಕ್ಕೆ ಮುಂದೂಡಲಾಯಿತು.

ಜನವರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಡಿಪಿಪಿ)ಯ ಲಾಯ್ ಜಯ ಸಾಧಿಸಿದ್ದಾರೆ. ಆದರೆ ಬಳಿಕ ನಡೆದ ಸಂಸದೀಯ ಚುನಾವಣೆಯಲ್ಲಿ ಡಿಪಿಪಿ ಪಕ್ಷ ಸಂಸತ್‍ನಲ್ಲಿ ಬಹುಮತ ಪಡೆಯಲು ವಿಫಲವಾಗಿದೆ. ಪ್ರಮುಖ ವಿಪಕ್ಷ ಕುವೊ ಮಿಂಟಾಂಗ್(ಕೆಎಂಟಿ) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಪಡೆದಿಲ್ಲ. ಆದ್ದರಿಂದ ಮತ್ತೊಂದು ಪಕ್ಷ ತೈವಾನ್ ಪೀಪಲ್ಸ್ ಪಾರ್ಟಿ(ಟಿಪಿಪಿ)ಯ ಜತೆ ಚುನಾವಣೋತ್ತರ ಮೈತ್ರಿಗೆ ನಿರ್ಧರಿಸಿದೆ. ಎರಡೂ ಪಕ್ಷಗಳು ಸೇರಿಕೊಂಡು ಸಂಸತ್ ಸುಧಾರಣಾ ಮಸೂದೆಯನ್ನು ಮಂಡಿಸಿವೆ. ಸರಕಾರಕ್ಕಿಂತ ಸಂಸತ್‍ಗೆ ಹೆಚ್ಚಿನ ಅಧಿಕಾರ ನೀಡುವ, ಸಂಸತ್‍ನಲ್ಲಿ ಸುಳ್ಳು ಹೇಳಿಕೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಂಸತ್‍ಗೆ ಅಧಿಕಾರ ನೀಡುವ ಉದ್ದೇಶದ ಮಸೂದೆ ಇದಾಗಿದೆ. ತಮಗೆ ಸದಸ್ಯಬಲ ಇದೆ ಎಂಬ ಕಾರಣಕ್ಕೆ ಇತರ ಪಕ್ಷಗಳೊಂದಿಗೆ ಸಮಾಲೋಚಿಸುವ ಸಂಪ್ರದಾಯವನ್ನು ಕೆಎಂಟಿ ಧಿಕ್ಕರಿಸಿದೆ ಎಂದು ಡಿಪಿಪಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News