ವ್ಯಾಗ್ನರ್ ಪಡೆಯ ಮುಖ್ಯಸ್ಥ ಪ್ರಿಗೊಝಿನ್ ಮೃತಪಟ್ಟಿರುವ ಸಾಧ್ಯತೆಯಿದೆ, ಆದರೆ ದೃಢಪಟ್ಟಿಲ್ಲ; ಬ್ರಿಟನ್ ರಕ್ಷಣಾ ಇಲಾಖೆ
ಲಂಡನ್: ವ್ಯಾಗ್ನರ್ ಪಡೆಯ ಮುಖ್ಯಸ್ಥ ಯೆವ್‍ಗಿನಿ ಪ್ರಿಗೊಝಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ ಎಂದು ಬ್ರಿಟನ್‍ನ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ.
ಬುಧವಾರ ಮಾಸ್ಕೋದಿಂದ ಸೈಂಟ್ ಪೀಟರ್ಸ್‍ಬರ್ಗ್ ನಗರಕ್ಕೆ ಸಂಚರಿಸುತ್ತಿದ್ದ ಖಾಸಗಿ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಪ್ರಿಗೊಝಿನ್ ಸಹಿತ 7 ಪ್ರಯಾಣಿಕರಿದ್ದರು. ಟ್ವೆವರ್ ಪ್ರಾಂತದ ಕುಝೆಂಕಿನೊ ಎಂಬ ಗ್ರಾಮದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ್ದು ಮೂವರು ಪೈಲಟ್‍ಗಳ ಸಹಿತ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ರಶ್ಯದ ವಿದೇಶಾಂಗ ಇಲಾಖೆ ವರದಿ ಮಾಡಿತ್ತು.
ಘಟನೆಯ ಬಗ್ಗೆ ರಶ್ಯದ ತನಿಖಾ ಸಂಸ್ಥೆ ತನಿಖೆ ಆರಂಭಿಸಿದ್ದರೂ ದುರಂತದ ಅವಶೇಷಗಳಲ್ಲಿ ಪತ್ತೆಯಾದ 10 ಮೃತದೇಹಗಳನ್ನು ಇನ್ನೂ ಅಧಿಕೃತವಾಗಿ ಗುರುತಿಸಿಲ್ಲ. ಪ್ರಿಗೊಝಿನ್ ವಿಮಾನದಲ್ಲಿದ್ದರು ಎಂಬುದಕ್ಕೆ ಇನ್ನೂ ಖಚಿತವಾದ ಪುರಾವೆಗಳಿಲ್ಲ. ಅವರು ಅಸಾಧಾರಣ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದರು ಎಂಬ ವರದಿಯಿದೆ' ಎಂದು ಬ್ರಿಟನ್ ರಕ್ಷಣಾ ಇಲಾಖೆ ಹೇಳಿದೆ.