ಅಮೆರಿಕದ ಹಲವು ವಿವಿಗಳಿಗೆ ವ್ಯಾಪಿಸಿದ ಫೆಲೆಸ್ತೀನ್ ಪರ ಪ್ರತಿಭಟನೆ

Update: 2024-04-24 16:43 GMT

Image: Fatih Aktas/AA/picture alliance

ನ್ಯೂಯಾರ್ಕ್: ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ಆರಂಭವಾದ ಫೆಲೆಸ್ತೀನ್ ಪರ ಪ್ರತಿಭಟನೆ ಇದೀಗ ದೇಶದ ಹಲವು ಪ್ರಮುಖ ವಿವಿಗಳಿಗೆ ವ್ಯಾಪಿಸಿದ್ದು ವಿವಿಯ ಕ್ಯಾಂಪಸ್‍ಗಳಲ್ಲಿ ಟೆಂಟ್ ಹಾಕಿಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

ಕೊಲಂಬಿಯಾ ವಿವಿಯಲ್ಲಿ ಕಳೆದ ವಾರಾಂತ್ಯ ಪ್ರತಿಭಟನೆ ಭುಗಿಲೆದ್ದಿದ್ದು ವಿದ್ಯಾರ್ಥಿಗಳು ಕ್ಯಾಂಪಸ್‍ನಲ್ಲಿ `ಗಾಝಾ ಒಗ್ಗಟ್ಟಿನ ಶಿಬಿರ'ವನ್ನು ಸ್ಥಾಪಿಸಿದ್ದರು. ಶಿಬಿರವನ್ನು ತೆರವುಗೊಳಿಸಲು ವಿವಿ ಅಧಿಕಾರಿಗಳು ನೀಡಿದ್ದ ಸೂಚನೆಯನ್ನು ಧಿಕ್ಕರಿಸಿದ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದ್ದು 108 ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಇದೀಗ ಇತರ ಹಲವು ವಿವಿಗಳಿಗೂ ಪ್ರತಿಭಟನೆ ವ್ಯಾಪಿಸಿದ್ದು ಯೇಲ್ ವಿವಿ, ಮಸಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯೂಯಾರ್ಕ್ ವಿವಿ, ಬರ್ಕ್‍ಲೆ ವಿವಿ, ಮಿಚಿಗನ್ ವಿವಿಗಳಲ್ಲಿ ವಿದ್ಯಾರ್ಥಿಗಳು ವಿವಿಯ ಕಟ್ಟಡವನ್ನು ಆಕ್ರಮಿಸಿಕೊಂಡು ರ‍್ಯಾಲಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‍ನಿಂದ ದೂರವಿರಬೇಕು ಎಂದು ಅಮೆರಿಕ ಸರಕಾರವನ್ನು ಒತ್ತಾಯಿಸಿ ಮತ್ತು ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕೊಲಂಬಿಯಾ ವಿವಿ ವಿದ್ಯಾರ್ಥಿಗಳ ಜತೆಗೆ ಆಡಳಿತ ಮಂಡಳಿ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿರುವುದರಿಂದ ಕ್ಯಾಂಪಸ್ ಅನ್ನು ಮುಚ್ಚಿ ಆನ್‍ಲೈನ್ ಮೂಲಕ ತರಗತಿ ನಡೆಸುವುದಾಗಿ ಆಡಳಿತ ಮಂಡಳಿ ಘೋಷಿಸಿದೆ. ನ್ಯೂಯಾರ್ಕ್ ವಿವಿಯಲ್ಲಿ ಪೊಲೀಸರತ್ತ ಬಾಟಲಿಗಳನ್ನು ಎಸೆದ ಆರೋಪದಲ್ಲಿ 133 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಯೇಲ್ ವಿವಿಯ ಆವರಣದಲ್ಲಿ ಪ್ರತಿಭಟನಾಕಾರರು ಸ್ಥಾಪಿಸಿರುವ ಶಿಬಿರವನ್ನು ತೆರವುಗೊಳಿಸುವಂತೆ ಆಡಳಿತ ವರ್ಗ ನೀಡಿದ್ದ ಸೂಚನೆಯನ್ನು ಮಾನ್ಯ ಮಾಡದ ಹಿನ್ನೆಲೆಯಲ್ಲಿ ಪೊಲೀಸರನ್ನು ಕರೆದು ಶಿಬಿರಗಳನ್ನು ತೆರವುಗೊಳಿಸಲಾಗಿದೆ. 47 ವಿದ್ಯಾರ್ಥಿಗಳ ಸಹಿತ ಸುಮಾರು 60 ಪ್ರತಿಭಟನಾಕಾರರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News