ಗಾಝಾದಲ್ಲಿ ಸೇನಾ ಆಕ್ರಮಣಕ್ಕೆ ಪ್ರತಿಭಟನೆ: ಇಸ್ರೇಲ್ ಜೊತೆ ನಂಟು ಕಡಿದುಕೊಂಡ ಬೊಲಿವಿಯಾ

Update: 2023-11-01 17:13 GMT

Photo: PTI

ಗಾಝಾ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ವ್ಯಾಪಕ ಆಕ್ರಮಣಗಳಿಗೆ ಪ್ರತಿಭಟನೆಯಾಗಿ ತಾನು ಆ ದೇಶದ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಬೊಲಿವಿಯಾ ಮಂಗಳವಾರ ಘೋಷಿಸಿದೆ.

ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆಯು ನಡೆಸುತ್ತಿರುವ ಆಕ್ರಮಣಕಾರಿ ಹಾಗೂ ವ್ಯಾಪಕ ಸೇನಾದೌರ್ಜನ್ಯಕ್ಕೆ ಖಂಡನೆಯಾಗಿ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ಬೊಲಿವಿಯಾ ನಿರ್ಧರಿಸಿದೆ ಎಂದು ಬೊಲಿವಿಯಾದ ವಿದೇಶಾಂಗ ಸಚಿವ ಫ್ರೆಡ್ಡಿ ಮಾಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಸಂಘರ್ಷ ಪೀಡಿತ ಗಾಝಾಗೆ ಮಾನವೀಯ ನೆರವನ್ನು ಕಳುಹಿಸಿಕೊಡುವುದಾಗಿ ಬೊಲಿವಿಯಾ ಸಚಿವೆ ಮಾರಿಯಾ ನೆಲಾ ಪ್ರಾಡಾ ಅವರು ತಿಳಿಸಿದ್ದಾರೆ.

ಗಾಝಾಪಟ್ಟಯಲ್ಲಿ ಸಾವಿರಾರು ನಾಗರಿಕ ಸಾವುಗಳು ಹಾಗೂ ಫೆಲೆಸ್ತೀನಿಯರ ಬಲವಂತದ ಸ್ಥಳಾಂತರಕ್ಕೆ ಕಾರಣವಾದ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಮಾರಿಯಾ ಹೇಳಿದ್ದಾರೆ.

ಲ್ಯಾಟಿನ್ ಅಮೆರಿಕದ ರಾಷ್ಟ್ರವಾದ ಬೊಲಿವಿಯಾದ ಲೂಯಿಸ್ ಆರ್ಸೆ ನೇತೃತ್ವದ ಎಡಪಂಥೀಯ ಸರಕಾರವು ಗಾಝಾ ದಾಳಿಗೆ ಪ್ರತಿಭಟನೆಯಾಗಿ ಇಸ್ರೇಲ್ ಜೊತೆ ಸಂಬಂಧ ಕಡಿದುಕೊಂಡ ಮೊದಲ ಲ್ಯಾಟಿನ್ ಅಮೆರಿಕನ್ ರಾಷ್ಟ್ರವಾಗಿದೆ.

ಬೊಲಿವಿಯಾದ ನಡೆಯನ್ನು ಇಸ್ರೇಲ್ ಖಂಡಿಸಿದ್ದು, ಇದು ಭಯೋತ್ಪಾದನೆಯೆದುರಿನ ಶರಣಾಗತಿಯಾಗಿದೆ ಎಂದು ಟೀಕಿಸಿದೆ. ‘‘ಈ ಹೆಜ್ಜೆಯನ್ನಿಡುವ ಮೂಲಕ ಬೊಲಿವಿಯಾ ಸರಕಾರವು ಹಮಾಸ್‌ನ ಜೊತೆಗೂಡಿದಂತಾಗಿದೆ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಲಿಯೊರ್ ಹೈಯಾಟ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News