ಪುಟಿನ್ ಅವರ ಪರಮಾಣು ಶಸ್ತ್ರ ಬೆದರಿಕೆಗೆ ಹೆದರುವುದಿಲ್ಲ : ಜರ್ಮನಿ

Update: 2024-07-30 17:09 GMT

ವ್ಲಾದಿಮಿರ್ ಪುಟಿನ್ | Photo : PTI

ಬರ್ಲಿನ್ : ಯುರೋಪ್‍ನಲ್ಲಿ ಕ್ಷಿಪಣಿಗಳನ್ನು ನಿಯೋಜಿಸುವ ಉದ್ದೇಶವನ್ನು ಅಮೆರಿಕ ದೃಢಪಡಿಸಿದರೆ ಮಧ್ಯಂತರ ಶ್ರೇಣಿಯ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಮರುಪ್ರಾರಂಭಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬೆದರಿಕೆಗೆ ಹೆದರುವುದಿಲ್ಲ ಎಂದು ಜರ್ಮನಿ ಹೇಳಿದೆ.

ಇಂತಹ ಕ್ಷಿಪಣಿಗಳನ್ನು ರಶ್ಯವು ಈಗಾಗಲೇ ಅಭಿವೃದ್ಧಿಗೊಳಿಸಿದೆ ಮತ್ತು ನಿಯೋಜಿಸಿದೆ. ಈ ಶಸ್ತ್ರಾಸ್ತ್ರಗಳನ್ನು ಜರ್ಮನಿ ಅಥವಾ ಗುರಿಗಳ ವಿರುದ್ಧ ಬಳಸದಂತೆ ತಡೆಯುವುದು ಈಗ ನಮ್ಮ ಯೋಜನೆಯಾಗಿದೆ ಎಂದು ಜರ್ಮನಿಯ ವಿದೇಶಾಂಗ ಇಲಾಖೆ ವಕ್ತಾರ ಸೆಬಾಸ್ಟಿಯನ್ ಫಿಷರ್ ಹೇಳಿದ್ದಾರೆ.

ಟೊಮಾಹಾಕ್ ಕ್ರೂಸ್‍ಕ್ಷಿಪಣಿಗಳು ಸೇರಿದಂತೆ ಜರ್ಮನಿಯಲ್ಲಿ ಅಮೆರಿಕದ ದೀರ್ಘಶ್ರೇಣಿಯ ಕ್ಷಿಪಣಿಗಳ ಅನಿಯಮಿತ ನಿಯೋಜನೆ 2026ರಿಂದ ಪ್ರಾರಂಭವಾಗಲಿದೆ ಎಂದು ಜುಲೈ ಆರಂಭದಲ್ಲಿ ಅಮೆರಿಕ ಮತ್ತು ಜರ್ಮನಿ ಘೋಷಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಪುಟಿನ್ ` ಈ ಯೋಜನೆ ಮುಂದುವರಿದರೆ ಮಧ್ಯಂತರ ಶ್ರೇಣಿಯ ಪರಮಾಣು ಉತ್ಪಾದನೆಯನ್ನು ಪುನರಾರಂಭಿಸುವುದಾಗಿ' ಎಚ್ಚರಿಕೆ ನೀಡಿದ್ದರು. ಮಧ್ಯಮ ಮತ್ತು ಅಲ್ಪಶ್ರೇಣಿಯ ದಾಳಿ ಸಾಮಥ್ರ್ಯದ ಅಸ್ತ್ರಗಳ ನಿಯೋಜನೆಯ ಮೇಲೆ ಈ ಹಿಂದೆ ಅಳವಡಿಸಿಕೊಂಡ ಏಕಪಕ್ಷೀಯ ನಿಷೇಧದಿಂದ ನಾವು ವಿಮೋಚನೆಗೊಂಡಿರುವುದಾಗಿ ಪರಿಗಣಿಸಬಹುದು. ಇಂತಹ ಹಲವು ವ್ಯವಸ್ಥೆಗಳ ಉತ್ಪಾದನೆ ಅಂತಿಮ ಹಂತದಲ್ಲಿದೆ. ಅಮೆರಿಕದ ಕೃತ್ಯಗಳು, ಯುರೋಪ್ ಹಾಗೂ ವಿಶ್ವದ ಇತರ ವಲಯಗಳಲ್ಲಿ ಅಮೆರಿಕದ ಉಪಗ್ರಹಗಳ ಕಾರ್ಯವನ್ನು ಗಣನೆಗೆ ತೆಗೆದುಕೊಂಡು ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ಸೈಂಟ್ ಪೀಟರ್ಸ್‍ಬರ್ಗ್‍ನಲ್ಲಿ ನೌಕಾ ಕವಾಯತು ಸಂದರ್ಭ ಪುಟಿನ್ ಹೇಳಿದ್ದರು.

500ರಿಂದ 5,500 ಕಿ.ಮೀ ದೂರದವರೆಗೆ ಸಾಗಬಲ್ಲ ಈ ಕ್ಷಿಪಣಿಗಳು 1987ರಲ್ಲಿ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಸಹಿ ಹಾಕಲಾದ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ವ್ಯಾಪ್ತಿಗೆ ಬರುತ್ತವೆ. ಆದರೆ 2019ರಲ್ಲಿ ರಶ್ಯ ಮತ್ತು ಅಮೆರಿಕ ಎರಡೂ ದೇಶಗಳು ಈ ಒಪ್ಪಂದದಿಂದ ಹಿಂದಕ್ಕೆ ಸರಿದಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News