ರಶ್ಯ-ಉಕ್ರೇನ್ ಸಂಘರ್ಷದ ಕುರಿತು ಟ್ರಂಪ್ ಜತೆ ಮಾತುಕತೆಗೆ ಪುಟಿನ್ ಮುಕ್ತ
ಮಾಸ್ಕೋ: ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆಗೆ ಮುಕ್ತರಾಗಿದ್ದಾರೆ ಎಂದು ರಶ್ಯ ಅಧ್ಯಕ್ಷರ ಕಚೇರಿ ಶುಕ್ರವಾರ ಹೇಳಿದೆ.
` ಅಮೆರಿಕ ಅಧ್ಯಕ್ಷರು ಸೇರಿದಂತೆ, ಡೊನಾಲ್ಡ್ ಟ್ರಂಪ್ ಸೇರಿದಂತೆ ಅಂತರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಲು ತಮ್ಮ ಮುಕ್ತತೆಯನ್ನು ಅಧ್ಯಕ್ಷರು ಪದೇಪದೇ ಉಲ್ಲೇಖಿಸಿದ್ದಾರೆ' ಎಂದು ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜನವರಿ 20ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಟ್ರಂಪ್, ಸುಮಾರು 3 ವರ್ಷದಿಂದ ಮುಂದುವರಿದಿರುವ ರಶ್ಯ-ಉಕ್ರೇನ್ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಬಹುದು ಎಂದು ಪದೇ ಪದೇ ಹೇಳುತ್ತಾ ಬಂದಿದ್ದಾರೆ. `ರಶ್ಯ ಅಧ್ಯಕ್ಷ ಪುಟಿನ್ ಭೇಟಿಯಾಗಲು ಬಯಸಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅವರ ಜತೆ ಸಭೆ ನಡೆಸಲಾಗುವುದು' ಎಂದು ಟ್ರಂಪ್ ಗುರುವಾರ ಹೇಳಿದ್ದಾರೆ.
`ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಟ್ರಂಪ್ ಸಿದ್ಧರಾಗಿರುವುದನ್ನು ರಶ್ಯ ಸ್ವಾಗತಿಸುತ್ತದೆ. ಯಾವುದೇ ಷರತ್ತಿನ ಅಗತ್ಯವಿಲ್ಲ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ವಿಶ್ವಾಸ ಮತ್ತು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ' ಎಂದು ಪೆಸ್ಕೋವ್ ಹೇಳಿದ್ದಾರೆ.
ಸಂಘರ್ಷವನ್ನು ಕ್ಷಿಪ್ರವಾಗಿ ಅಂತ್ಯಗೊಳಿಸುವ ಬಗ್ಗೆ ಟ್ರಂಪ್ ಹೇಳಿಕೆಯಿಂದ ಉಕ್ರೇನ್‍ಗೆ ಕಳವಳ, ಆತಂಕ ಹೆಚ್ಚಿದೆ. ರಶ್ಯದ ಪರವಾದ ಅಂಶಗಳನ್ನು ಒಳಗೊಂಡ ಕದನ ವಿರಾಮ ಒಪ್ಪಂದಕ್ಕೆ ಸಹಿಹಾಕುವಂತೆ ಉಕ್ರೇನ್ ಮೇಲೆ ಒತ್ತಡ ಬೀಳಬಹುದು ಎಂಬ ಆತಂಕವನ್ನು ಉಕ್ರೇನ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.