ಉಕ್ರೇನ್‍ಗೆ ಪರಾರಿಯಾಗಲು ದಾಳಿಕೋರರ ಪ್ರಯತ್ನ: ಪುಟಿನ್
ಮಾಸ್ಕೋ : ಇಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ಉಕ್ರೇನ್‍ಗೆ ಪರಾರಿಯಾಗಲು ಪ್ರಯತ್ನಿಸಿದ್ದರು. ಇವರನ್ನು ಗಡಿದಾಟಿಸಲು ಉಕ್ರೇನ್‍ನ ಬದಿಯಲ್ಲಿ ಕೆಲವರು ಸನ್ನದ್ಧರಾಗಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಉಕ್ರೇನ್‍ನ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಆರೋಪಿಸಿದ್ದಾರೆ.
ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ` ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಮಾರ್ಚ್ 24ನ್ನು(ರವಿವಾರ) ರಾಷ್ಟ್ರೀಯ ಶೋಕಾಚರಣೆ ದಿನವಾಗಿ ಘೋಷಿಸಲಾಗಿದೆ' ಎಂದರು.
ಗುಂಡಿನ ದಾಳಿ ನಡೆಸಿದ ಬಳಿಕ ತಪ್ಪಿಸಿಕೊಂಡು ಉಕ್ರೇನ್ ಗಡಿಯತ್ತ ಓಡಲು ಅವರು ಪ್ರಯತ್ನಿಸಿದ್ದಾರೆ. ರಶ್ಯದ ಗಡಿದಾಟಿ ಬರಲು ಅವರಿಗೆ ದಾರಿಯೊಂದನ್ನು ತೆರೆಯಲಾಗಿತ್ತು ಎಂಬುದು ಪ್ರಾಥಮಿಕ ಮಾಹಿತಿಯಿಂದ ದೃಢಪಟ್ಟಿದೆ. ದಾಳಿ ನಡೆಸಿದವರು, ಅವರನ್ನು ಬೆಂಬಲಿಸಿದವರು, ಸಂಚು ರೂಪಿಸಿದವರು ಎಲ್ಲರನ್ನೂ ಸೂಕ್ತ ರೀತಿಯಲ್ಲಿ ಶಿಕ್ಷಿಸಲಾಗುವುದು. ಅವರು ಯಾರೇ ಆಗಿರಲಿ, ಅಥವಾ ಅವರಿಗೆ ಮಾರ್ಗದರ್ಶನ ನೀಡುವವರು ಯಾರೇ ಆಗಿರಲಿ ಅವರನ್ನು ಗುರುತಿಸಿ ಶಿಕ್ಷಿಸಲಾಗುವುದು. ಇದು ರಶ್ಯದ ವಿರುದ್ಧದ, ರಶ್ಯದ ಜನತೆಯ ವಿರುದ್ಧದ ದಾಳಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಪುಟಿನ್ ಆರೋಪವನ್ನು ನಿರಾಕರಿಸಿರುವ ಉಕ್ರೇನ್, ಈ ಆರೋಪ ಆಧಾರರಹಿತವಾಗಿದೆ ಎಂದಿದೆ.