ಕಿರ್ಗಿಸ್ತಾನಕ್ಕೆ ಪುಟಿನ್ ಭೇಟಿ ; ಐಸಿಸಿ ವಾರಂಟ್ ಬಳಿಕದ ಪ್ರಥಮ ವಿದೇಶಿ ಪ್ರವಾಸ
ಬಿಷ್ಕೆಕ್: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಮಧ್ಯ ಏಶ್ಯಾದ ರಾಷ್ಟ್ರ ಕಿರ್ಗಿಸ್ತಾನಕ್ಕೆ ಭೇಟಿ ನೀಡಿ ಅಧ್ಯಕ್ಷ ಸದಿರ್ ಜಪರೋವ್ ಜತೆ ದ್ವಿಪಕ್ಷೀಯ ಸಹಕಾರ ಸಂಬಂಧ ಸುಧಾರಣೆಯ ಕುರಿತು ವಿಸ್ತತ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜಪರೋವ್ ಜತೆಗಿನ ಸಭೆಯಲ್ಲಿ ಪುಟಿನ್ ಪ್ರಮುಖ ವ್ಯಾಪಾರ ಪಾಲುದಾರ ಮತ್ತು ಕಿರ್ಗಿಜ್ ನ ಆರ್ಥಿಕತೆಯಲ್ಲಿ ಅತೀ ದೊಡ್ಡ ಹೂಡಿಕೆದಾರನಾಗಿ ರಶ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯದ ಬಗ್ಗೆ ಪ್ರತಿಪಾದಿಸಿದರು ಎಂದು ವರದಿ ಹೇಳಿದೆ.
ಉಕ್ರೇನ್ ನಲ್ಲಿ ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಕಳೆದ ಮಾರ್ಚ್ ನಲ್ಲಿ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ ಬಳಿಕ ಪುಟಿನ್ ಅವರ ಪ್ರಥಮ ವಿದೇಶಿ ಪ್ರವಾಸ ಇದಾಗಿದೆ. ರಶ್ಯ ಐಸಿಸಿಯ ಅಧಿಕಾರ ವ್ಯಾಪ್ತಿಯನ್ನು ಮಾನ್ಯ ಮಾಡಿಲ್ಲ ಮತ್ತು ಪುಟಿನ್ ವಿರುದ್ಧದ ಆರೋಪವನ್ನು ತಿರಸ್ಕರಿಸಿದೆ. ಮುಂದಿನ ವಾರ ಪುಟಿನ್ ಚೀನಾಕ್ಕೆ ಭೇಟಿ ನೀಡಲಿದ್ದು ಬೀಜಿಂಗ್ ನಲ್ಲಿ ನಡೆಯುವ 3ನೇ ‘ಬೆಲ್ಟ್ ಆ್ಯಂಡ್ ರೋಡ್’ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಿರ್ಗಿಸ್ತಾನ ಮತ್ತು ಚೀನಾ ಐಸಿಸಿಯ ಸದಸ್ಯ ದೇಶಗಳಲ್ಲ. ಆದ್ದರಿಂದ ಐಸಿಸಿಯ ಆದೇಶವನ್ನು ಪಾಲಿಸುವ ಬದ್ಧತೆ ಹೊಂದಿಲ್ಲ.
ಎರಡು ದಿನಗಳ ಕಿರ್ಗಿಸ್ತಾನ್ ಪ್ರವಾಸದಲ್ಲಿ ಪುಟಿನ್ ಶುಕ್ರವಾರ ‘ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್’ನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.