ಉಕ್ರೇನ್ ವಿಷಯದಲ್ಲಿ ಮಾತುಕತೆಗೆ ಸಿದ್ಧ : ಪುಟಿನ್
Update: 2024-05-15 17:16 GMT
ಮಾಸ್ಕೋ : ಉಕ್ರೇನ್ ವಿಷಯದಲ್ಲಿ ಮಾತುಕತೆಗೆ ತನ್ನ ಸರಕಾರ ಸಿದ್ಧವಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.
ಉಕ್ರೇನ್ ವಿಷಯದಲ್ಲಿ ನಡೆಯುವ ಮಾತುಕತೆ ರಶ್ಯ ಸೇರಿದಂತೆ ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ದೇಶಗಳ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಸಂಘರ್ಷವನ್ನು ಶಾಂತಿಯುತವಾದ ವಿಧಾನಗಳ ಮೂಲಕ ಸಮಗ್ರ, ಸುಸ್ಥಿರ, ಸಮರ್ಥನೀಯ ಮತ್ತು ನ್ಯಾಯಯುತ ರೀತಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಪುಟಿನ್ ಹೇಳಿದ್ದಾರೆ.
ಈಶಾನ್ಯ ಉಕ್ರೇನ್‍ನ ಖಾರ್ಕಿವ್ ಪ್ರಾಂತದ ಮೇಲೆ ರಶ್ಯ ಪಡೆಗಳು ಆಕ್ರಮಣ ತೀವ್ರಗೊಳಿಸುತ್ತಿರುವ ಸಂದರ್ಭದಲ್ಲಿ ಗುರುವಾರ ಪುಟಿನ್ ಚೀನಾಕ್ಕೆ ನೀಡುವ ಭೇಟಿ ಮಹತ್ವ ಪಡೆದಿದೆ. ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಬೀಜಿಂಗ್‍ನಲ್ಲಿ ನಡೆಯುವ ಸಭೆಯಲ್ಲಿ ಸಮಗ್ರ ಪಾಲುದಾರಿಕೆ ಮತ್ತು ಕಾರ್ಯತಂತ್ರದ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.