ಫೆಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡಲು ಸಿದ್ಧ: ಬ್ರಿಟನ್ ವಿದೇಶಾಂಗ ಸಚಿವ
ಲಂಡನ್: ಪ್ರದೇಶದಲ್ಲಿ ಶಾಂತಿಯನ್ನು ಖಿಚಿತಪಡಿಸುವ ಪ್ರಯತ್ನಗಳ ಅಂಗವಾಗಿ ಫೆಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡುವುದನ್ನು ಪರಿಗಣಿಸಲು ಬ್ರಿಟನ್ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ.
ಈ ರಾಜತಾಂತ್ರಿಕ ನಡೆಯು ದ್ವಿರಾಷ್ಟ್ರ ಪರಿಹಾರಕ್ಕೆ ಮಾರ್ಗವನ್ನು ಕಲ್ಪಿಸಲಿದೆ ಎಂದು ಕ್ಯಾಮರೂನ್ ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು ಪ್ರಸ್ತುತ ಇದನ್ನು ವಿರೋಧಿಸುತ್ತಿದ್ದಾರೆ.
‘ಫೆಲೆಸ್ತೀನ್ ದೇಶವು ಹೇಗಿರಲಿದೆ, ಅದು ಏನೇನನ್ನು ಒಳಗೊಂಡಿರಲಿದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಕಾರ್ಯಸೂಚಿಯನ್ನು ಬ್ರಿಟನ್ ಸಿದ್ಧಪಡಿಸಲಿದೆ. ಸಂದರ್ಭಕ್ಕೆ ಅನುಗುಣವಾಗಿ ವಿಶ್ವಸಂಸ್ಥೆ ಸೇರಿದಂತೆ ಫೆಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡುವ ವಿಷಯವನ್ನು ನಾವು ಮಿತ್ರರಾಷ್ಟ್ರಗಳೊಂದಿಗೆ ಸೇರಿಕೊಂಡು ಪರಿಶೀಲಿಸುತ್ತೇವೆ’ ಎಂದು ಹೇಳಿದ ಕ್ಯಾಮರೂನ್, ಯುದ್ಧಗ್ರಸ್ತ ಗಾಝಾಕ್ಕೆ ಹೆಚ್ಚಿನ ಸಹಾಯವನ್ನು ಒದಗಿಸಲು ಅವಕಾಶ ನೀಡುವಂತೆ ಇಸ್ರೇಲ್ ಅನ್ನು ಆಗ್ರಹಿಸಿದರು.
ಕಳೆದ ವರ್ಷದ ನವಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ಯಾಮರೂನ್ ನಾಲ್ಕನೇ ಬಾರಿಗೆ ಪಶ್ಚಿಮ ಏಶ್ಯಾಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ತನ್ನ ಮಾತುಕತೆಗಳಲ್ಲಿ ಅವರು ಕೆಂಪು ಸಮುದ್ರದಲ್ಲಿ ಹೌದಿಗಳ ದಾಳಿಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸಲಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಚೇರಿಯು ತಿಳಿಸಿದೆ.