ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯ ಆಯ್ಕೆಗೆ ಸ್ಪರ್ಧೆ
ವಾಶಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ನ್ಯೂಹ್ಯಾಂಪ್‌ಶೈರ್ ರಾಜ್ಯದಲ್ಲಿ ಶನಿವಾರ ನಡೆದ ಪ್ರಾಥಮಿಕ ಹಂತದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆಯನ್ನು ಸಾಧಿಸಿದ್ದರೆ, ಇಬ್ಬರು ಭಾರತೀಯ ಮೂಲದ ಅಮೆರಿಕನ್ ಅಭ್ಯರ್ಥಿಗಳು ಆನಂತರದ ಎರಡು ಸ್ಥಾನಗಳಲ್ಲಿದ್ದಾರೆ.
ಚುನಾವಣೆಯಲ್ಲಿ ಪಾಲ್ಗೊಂಡ ಶೇ.39ರಷ್ಟು ರಿಪಬ್ಲಿಕನ್ ಸದಸ್ಯರು ಟ್ರಂಪ್ ಪರವಾಗಿ ಮತಚಲಾಯಿಸಿದ್ದಾರೆ.ಮತಗಳಿಕೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಎರಡನೆ ಸ್ಥಾನದಲ್ಲಿದ್ದು, ಶೇ.13ರಷ್ಟು ಬೆಂಬಲ ಗಳಿಸಿದ್ದಾರೆ. ಇನ್ನೋರ್ವ ಭಾರತೀಯ-ಅಮೆರಿಕನ್, ದಕ್ಷಿಣ ಕರೋಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಶೇ.12ರಷ್ಟು ಮತಗಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಮುಖ್ಯ ಎದುರಾಳಿಯೆಂದು ಈ ಮೊದಲು ಪರಿಗಣಿಸಲ್ಪಟ್ಟಿದ್ದ ಫ್ಲೋರಿಡಾದ ಗವರ್ನರ್ ರಾನ್ ಡೆಸ್ಯಾಂಟಿಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಐದನೆ ಸ್ಥಾನಕ್ಕೆ ಜಾರಿದ್ದಾರೆ.
ಮತಗಳಿಕೆಯಲ್ಲಿ ಡೆಸ್ಯಾಂಟಿಸ್ ಅವರು ವಿವೇಕ್ ರಾಮಸ್ವಾಮಿ ಹಾಗೂ ನಿಕ್ಕಿ ಹ್ಯಾಲೆಗಿಂತ ತೀರಾ ಹಿಂದಿದ್ದು , ಕೇವಲ ಶೇ.6ರಷ್ಟು ಮತಗಳನ್ನು ಪಡೆದಿದ್ದಾರೆ. ಜುಲೈನಲ್ಲಿ ನಡೆದ ಪ್ರೈಮರಿ ಚುನಾವಣೆಯಲ್ಲಿ ಅವರಿಗೆ ಶೇ.26ರಷ್ಟು ಮತಗಳು ದೊರೆತಿದ್ದವು.
ಕಣದಲ್ಲಿರುವ ಇನ್ನೋರ್ವ ಆಕಾಂಕ್ಷಿ ಅಭ್ಯರ್ಥಿ, ನ್ಯೂಜೆರ್ಸಿಯ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿಗೆ ಶೇ.11ರಷ್ಟು ಮತಗಳು ದೊರೆತಿವೆ.