ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಸ್ಪರ್ಧೆ: ಎರಡನೆ ಸ್ಥಾನದಲ್ಲಿ ಸಮಬಲ ಸಾಧಿಸಿದ ಭಾರತ ಮೂಲದ ವಿವೇಕ್ ರಾಮಸ್ವಾಮಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದ್ದು, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಪರ್ಧೆಯಲ್ಲಿ ಮುಂಚೂಣಿ ಸ್ಪರ್ಧಾಳುವಾಗಿರುವ ಭಾರತ ಮೂಲದ ವಿವೇಕ್ ರಾಮಸ್ವಾಮಿ, ಹೊಸ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಫ್ಲೋರಿಡಾ ಗವರ್ನರ್ ರಾನ್ ಡಿಸ್ಯಾಂಟಿಸ್ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ.
ಈ ಕುರಿತು ಎಮರ್ಸನ್ ಕಾಲೇಜ್ ನಡೆಸಿರುವ ಸಮೀಕ್ಷೆಯಲ್ಲಿ ಡಿಸ್ಯಾಂಟಿಸ್ ಹಾಗೂ ರಾಮಸ್ವಾಮಿ ತಲಾ ಶೇ. 10ರಷ್ಟು ಮತಗಳೊಂದಿಗೆ ಸಮಬಲ ಸಾಧಿಸಿದ್ದು, ಶೇ. 56ರಷ್ಟು ಮತಗಳೊಂದಿಗೆ ಮುನ್ನಡೆಯಲ್ಲಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಹಿಂದೆ ಬಿದ್ದಿದ್ದಾರೆ ಎಂದು The Hill ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೂನ್ ತಿಂಗಳಲ್ಲಿ ಸಂಗ್ರಹಿಸಲಾಗಿದ್ದ ಜನಾಭಿಪ್ರಾಯದಲ್ಲಿ ಶೇ. 21ರಷ್ಟು ಮತ ಪಡೆದಿದ್ದ ಡಿಸ್ಯಾಂಟಿಸ್, ಈ ಬಾರಿಯ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಕೇವಲ ಶೇ. 10ರಷ್ಟು ಮತ ಪಡೆಯುವ ಮೂಲಕ ಭಾರಿ ಕುಸಿತ ದಾಖಲಿಸಿದ್ದಾರೆ. ಇದೇ ವೇಳೆ, ಇದಕ್ಕೂ ಮುನ್ನ ಶೇ. 2ರಷ್ಟು ಮತ ಮಾತ್ರ ಪಡೆದಿದ್ದ ರಾಮಸ್ವಾಮಿ, ಹೊಸ ಸಮೀಕ್ಷೆಯಲ್ಲಿ ಶೇ. 10ರಷ್ಟು ಮತ ಗಳಿಸುವ ಮೂಲಕ ತಮ್ಮ ಜನ ಬೆಂಬಲವನ್ನು ಹೆಚ್ಚಿಸಿಕೊಂಡಿದ್ದಾರೆ.
The Hill ಸುದ್ದಿ ಸಂಸ್ಥೆಯ ವರದಿ ಪ್ರಕಾರ, ರಾಮಸ್ವಾಮಿ ಬೆಂಬಲಿಗರಿಗೆ ಹೋಲಿಸಿದರೆ ಡಿಸ್ಯಾಂಟಿಸ್ ಬೆಂಬಲಿಗರು ಹೆಚ್ಚು ಚಂಚಲರಾಗಿದ್ದಾರೆ.
ರಾಮಸ್ವಾಮಿ ಬೆಂಬಲಿಗರ ಪೈಕಿ ಬಹುತೇಕ ಅರ್ಧದಷ್ಟು ಮಂದಿ ನಾವು ಅವರಿಗೇ ಮತ ಚಲಾಯಿಸುತ್ತೇವೆ ಎಂದು ಹೇಳಿದ್ದರೆ, ಡಿಸ್ಯಾಂಟಿಸ್ ಬೆಂಬಲಿಗರ ಪೈಕಿ ಕೇವಲ ಮೂರನೆ ಒಂದು ಭಾಗದಷ್ಟು ಮಂದಿ ಮಾತ್ರ ಈ ಮಾತನ್ನು ಹೇಳಿದ್ದಾರೆ.
ಈ ನಡುವೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ. 80ರಷ್ಟು ಬೆಂಬಲಿಗರು ನಾವು ಖಂಡಿತ ಅವರಿಗೇ ಮತ ಚಲಾಯಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.