ಗಾಝಾದ ಮೇಲೆ ಇಸ್ರೇಲ್ ದಾಳಿಗೆ ಪ್ರತಿಕಾರ | ಟೆಲ್ ಅವೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಹಮಾಸ್
ಜೆರುಸಲೇಂ: ಈ ವಾರ ಕದನ ವಿರಾಮದ ಕುರಿತ ಚರ್ಚೆಯನ್ನು ಪುನಾರಂಭಿಸಲು ಮುಂದಾಗಿರುವ ಬೆನ್ನಿಗೇ, ಗಾಝಾ ಮೇಲೆ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 19 ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್ ಇಸ್ರೇಲ್ ನ ವಾಣಿಜ್ಯ ತಾಣವಾದ ಟೆಲ್ ಅವೀವ್ ಮೇಲೆ ಎರಡು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ನಲ್ಲಿ ಯಾರೂ ಮೃತಪಟ್ಟ ವರದಿಯಾಗಿಲ್ಲ. ಗಾಝಾದಿಂದ ಎರಡು ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಈ ಪೈಕಿ ಒಂದು ಸಮುದ್ರಕ್ಕೆ ಬಿದ್ದಿದ್ದರೆ, ಮತ್ತೊಂದು ಕ್ಷಿಪಣಿ ಇಸ್ರೇಲ್ ಪ್ರದೇಶವನ್ನು ತಲುಪಿಲ್ಲ ಎಂದು ಇಸ್ರೇಲ್ ಸೇನಾಪಡೆ ಹೇಳಿದೆ.
ಇಸ್ರೇಲ್ ನಡೆಸುತ್ತಿರುವ ನಾಗರಿಕರ ಮಾರಣ ಹೋಮ ಹಾಗೂ ನಮ್ಮ ನಾಗರಿಕರನ್ನು ಬಲವಂತವಾಗಿ ತೆರವುಗೊಳಿಸುತ್ತಿರುವುದಕ್ಕೆ ಪ್ರತಿಯಾಗಿ ನಾವು ಟೆಲ್ ಅವೀವ್ ಹಾಗೂ ಅದರ ಉಪನಗರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದೇವೆ ಎಂದು ಹಮಾಸ್ ಸೇನಾ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕೇಂದ್ರ ಮತ್ತು ದಕ್ಷಿಣ ಗಾಝಾ ಪಟ್ಟಿಯಲ್ಲಿ 19 ಮಂದಿ ಫೆಲೆಸ್ತೀನರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿಗಳು ತಿಳಿಸಿದ್ದಾರೆ. ಇಸ್ರೇಲ್ ಮೇಲೆ ತಾನು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇದಕ್ಕೂ ಮುನ್ನ ಕಳೆದ ಮೇ ತಿಂಗಳಲ್ಲಿ ಹಮಾಸ್ ಹೊಣೆ ಹೊತ್ತುಕೊಂಡಿತ್ತು.
ಒಂದು ವೈಮಾನಿಕ ದಾಳಿಯಲ್ಲಿ ದೈರ್ ಅಲ್-ಬಲಾದ ಆರು ಮಂದಿ ಹತ್ಯೆಗೀಡಾಗಿದ್ದು, ಈ ಪೈಕಿ ಓರ್ವ ತಾಯಿ ಹಾಗೂ ಆಕೆಯ ನಾಲ್ಕು ದಿನಗಳ ಅವಳಿ ಮಕ್ಕಳು ಸೇರಿವೆ. ಇದಲ್ಲದೆ ಅಲ್-ಬುರೇಜಿ ಶಿಬಿರದ ಬಳಿ ನಡೆದಿರುವ ವೈಮಾನಿಕ ದಾಳಿಯಲ್ಲಿ ಇನ್ನೂ ಏಳು ಮಂದಿ ಫೆಲೆಸ್ತೀನಿಯನ್ನರು ಹತರಾಗಿದ್ದಾರೆ.
ಪ್ರತ್ಯೇಕ ವೈಮಾನಿಕ ದಾಳಿಗಳಲ್ಲಿ ಕೇಂದ್ರ ಗಾಝಾ ಪಟ್ಟಿಯ ಅಲ್-ಮಘಝಿ ಶಿಬಿರ ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ರಫಾ ನಗರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಉತ್ತರ ಗಾಝಾ ನಗರದ ನೆರೆಯಲ್ಲಿರುವ ಶೇಖ್ ರದ್ವಾನ್ ನಲ್ಲಿನ ಮನೆಯೊಂದರ ಮೇಲೆ ನಡೆದಿರುವ ವೈಮಾನಿಕ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿಗಳು ತಿಳಿಸಿದ್ದಾರೆ.
ನಾವು ಗಾಝಾದ ಹಲವಾರು ಪ್ರದೇಶಗಳಲ್ಲಿ ಪರಸ್ಪರ ಹೋರಾಡುತ್ತಿದ್ದೇವೆ ಎಂದು ಇಸ್ರೇಲ್ ಸೇನಾಪಡೆ ಹಾಗೂ ಇಸ್ಲಾಮಿಕ್ ಜಿಹಾದ್ ಮತ್ತು ಹಮಾಸ್ ಗುಂಪುಗಳು ಪ್ರತಿಪಾದಿಸಿವೆ.