ಹಮಾಸ್ ದಾಳಿಯಲ್ಲಿ ವಿಶ್ವಸಂಸ್ಥೆ ಏಜೆನ್ಸಿಯ ಸಿಬ್ಬಂದಿಗಳ ಪಾತ್ರ : ಇಸ್ರೇಲ್ ಆರೋಪ, ಅಮೆರಿಕದ ನೆರವು ಸ್ಥಗಿತ

Update: 2024-01-27 17:47 GMT

Photo: PTI 

ವಾಷಿಂಗ್ಟನ್: ಅಕ್ಟೋಬರ್ 7ರಂದು ಹಮಾಸ್ ನೇತೃತ್ವದಲ್ಲಿ ನಡೆದ ದಾಳಿಗಳಲ್ಲಿ `ಫೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಪರಿಹಾರ ಮತ್ತು ನೆರವು ಏಜೆನ್ಸಿ(ಯುಎನ್‍ಆರ್‍ಡಬ್ಲ್ಯೂಎ)ಯ 12 ಸಿಬ್ಬಂದಿಗಳು ಶಾಮೀಲಾಗಿದ್ದರು ಎಂದು ಇಸ್ರೇಲ್ ಆರೋಪಿಸಿರುವ ಹಿನ್ನೆಲೆಯಲ್ಲಿ ಯುಎನ್‍ಆರ್‍ಡಬ್ಲ್ಯೂಎಗೆ ನೀಡುತ್ತಿರುವ ಎಲ್ಲಾ ಹಣಕಾಸಿನ ನೆರವನ್ನೂ ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

ಫೆಲೆಸ್ತೀನ್ ನಿರಾಶ್ರಿತರಿಗೆ ಪರಿಹಾರ ಮತ್ತು ನೆರವನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ 1949ರಲ್ಲಿ ಯುಎನ್‍ಆರ್‍ಡಬ್ಲ್ಯೂಎ ಸ್ಥಾಪಿಸಲ್ಪಟ್ಟಿದೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಯುಎನ್‍ಆರ್‍ಡಬ್ಲ್ಯೂಎ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಸಂಸ್ಥೆಯ ವಾಹನಗಳು ಮತ್ತು ವ್ಯವಸ್ಥೆಗಳನ್ನು ಹಮಾಸ್‍ಗೆ ಒದಗಿಸಿದ್ದರು ಎಂದು ಗುಪ್ತಚರ ಇಲಾಖೆಯು ಇಸ್ರೇಲ್ ರಕ್ಷಣಾ ಇಲಾಖೆಗೆ ವರದಿ ನೀಡಿತ್ತು. `ಈ ವರದಿಯಿಂದ ಬೇಸರವಾಗಿದೆ. ಸುಮಾರು 12 ಸಿಬ್ಬಂದಿಗಳ ವಿರುದ್ಧ ಆರೋಪವಿದೆ. ಯುಎನ್‍ಆರ್‍ಡಬ್ಲ್ಯೂಎಗೆ ನೀಡುತ್ತಿರುವ ಹೆಚ್ಚುವರಿ ನೆರವನ್ನು ಬೈಡನ್ ಆಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಆರೋಪಗಳು ಹಾಗೂ ಅದರ ಬಗ್ಗೆ ವಿಶ್ವಸಂಸ್ಥೆ ಕೈಗೊಳ್ಳುವ ಕ್ರಮಗಳನ್ನು ಪರಿಶೀಲಿಸಲಿದ್ದೇವೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಏಜೆನ್ಸಿಗೆ ಹಣಕಾಸಿನ ನೆರವನ್ನು ಸಂಪೂರ್ಣ ಕಡಿತಗೊಳಿಸಿದ್ದರು. ಆದರೆ ಬೈಡನ್ ಆಡಳಿತ ನೆರವು ಯೋಜನೆಯನ್ನು ಮತ್ತೆ ಮುಂದುವರಿಸಿತ್ತು.

ಈ ಮಧ್ಯೆ, ಇಸ್ರೇಲ್ ಆರೋಪದ ಹಿನ್ನೆಲೆಯಲ್ಲಿ ತನ್ನ ಹಲವು ಉದ್ಯೋಗಿಗಳೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದ್ದು ತನಿಖೆಗೆ ಆದೇಶಿಸಿಸಲಾಗಿದೆ. ಆರೋಪಗಳು ಆಘಾತಕಾರಿಯಾಗಿದ್ದು ಭಯೋತ್ಪಾದಕ ಕೃತ್ಯಗಳಲ್ಲಿ ಯಾವುದೇ ಉದ್ಯೋಗಿ ತೊಡಗಿದ್ದರೆ ಅವರನ್ನು ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಯುಎನ್‍ಆರ್‍ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.

ಯುಎನ್‍ಆರ್‍ಡಬ್ಯ್ಲೂಎ ನಿರ್ವಹಿಸುತ್ತಿರುವ ಶಾಲೆಗಳ ಶಿಕ್ಷಕರು, ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳು, ನೆರವು ವಿತರಣೆ ಕಾರ್ಯಕರ್ತರ ಸಹಿತ 13,000 ಉದ್ಯೋಗಿಗಳು ಗಾಝಾದಲ್ಲಿ ಕೆಲಸ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News