ಉಕ್ರೇನ್ ನ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯದ ದಾಳಿ : ವ್ಯಾಪಕ ಹಾನಿ
ಮಾಸ್ಕೋ : ಅಮೆರಿಕ ಪೂರೈಸಿದ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ನಡೆಸಿದ ದಾಳಿಗೆ ಪ್ರತಿಯಾಗಿ ಉಕ್ರೇನ್ ನ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯ ಭಾರೀ ದಾಳಿ ನಡೆಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಶುಕ್ರವಾರ ಹೇಳಿದೆ.
ಮಿಲಿಟರಿ-ಕೈಗಾರಿಕೆ ವ್ಯವಸ್ಥೆಯನ್ನು ಬೆಂಬಲಿಸುವ ಉಕ್ರೇನ್ ನ ತೈಲ ಮತ್ತು ಇಂಧನ ಮೂಲಸೌಕರ್ಯದ ನಿರ್ಣಾಯಕ ಸೌಲಭ್ಯಗಳನ್ನು ಗುರಿಯಾಗಿಸಿ ವಾಯು ಮತ್ತು ಸಮುದ್ರ ಆಧಾರಿತ ದೀರ್ಘ ಶ್ರೇಣಿಯ ನಿಖರ ಶಸ್ತ್ರಾಸ್ತ್ರ ಮತ್ತು ಡ್ರೋನ್‍ಗಳನ್ನು ಬಳಸಿ ದಾಳಿ ನಡೆಸಿರುವುದಾಗಿ ಇಲಾಖೆ ಹೇಳಿದೆ. ಶುಕ್ರವಾರ ಬೆಳಗ್ಗೆ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯ ಕ್ಷಿಪಣಿಗಳ ಮಳೆಗರೆದಿದ್ದು ವ್ಯಾಪಕ ಹಾನಿಯುಂಟಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಉಕ್ರೇನ್ ನ ದಕ್ಷಿಣದಿಂದ ಮುಂದೊತ್ತಿ ಬರುತ್ತಿರುವ ರಶ್ಯದ ಪಡೆಗಳು ಅತ್ಯಂತ ಆಯಕಟ್ಟಿನ ನಗರ ಪೊಕ್ರೋವ್ಸ್ಕ್ ನ ಹೊರವಲಯ ತಲುಪಿದ್ದು ನಗರದಿಂದ ಕೇವಲ 1.5 ಕಿ.ಮೀ ದೂರದಲ್ಲಿವೆ ಎಂದು ವರದಿಯಾಗಿದೆ.
ಅಮೆರಿಕದ ವರ್ಜೀನಿಯಾ ರಾಜ್ಯದಷ್ಟು ವ್ಯಾಪ್ತಿಯ ಉಕ್ರೇನ್ ಪ್ರದೇಶ ಈಗ ರಶ್ಯ ಪಡೆಯ ನಿಯಂತ್ರಣಲ್ಲಿದ್ದು ಅತೀ ವೇಗದಲ್ಲಿ ಮುಂದುವರಿಯುತ್ತಿದೆ. ರಶ್ಯದ ವಿಶೇಷ ಪಡೆಯ ಸದಸ್ಯರು ಈಗಾಗಲೇ ಪೊಕ್ರೋವ್ಸ್ಕ್ ಪ್ರವೇಶಿಸಿದ್ದಾರೆ ಎಂದು ರಶ್ಯ ಮಿಲಿಟರಿ ಪರ ಬ್ಲಾಗರ್ ಯೂರಿ ಪೊಡೊಲ್ಯಕ ಹೇಳಿದ್ದಾರೆ. ನಗರದ ಬಳಿಯ ಹಲವು ಸೇನಾ ನೆಲೆಗಳು ರಶ್ಯದ ವಶವಾಗಿರುವುದನ್ನು ಉಕ್ರೇನ್ ಅಧಿಕಾರಿಗಳು ದೃಢಪಡಿಸಿದ್ದಾರೆ.