ಮಾನವೀಯ ನೆರವು ಕೇಂದ್ರದ ಮೇಲೆ ರಶ್ಯ ಕ್ಷಿಪಣಿ ದಾಳಿ: ಕನಿಷ್ಠ ಏಳು ನಾಗರಿಕರ ಮೃತ್ಯು
Update: 2023-07-11 17:34 GMT
ಕೀವ್: ಆಗ್ನೇಯ ಉಕ್ರೇನ್ನಲ್ಲಿ ಮಾನವೀಯ ನೆರವು ವಿತರಣಾ ಕೇಂದ್ರದ ಮೇಲೆ ರಶ್ಯದ ವಾಯುಪಡೆ ನಡೆಸಿದ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ದೇಶದ ಪೂರ್ವ ಭಾಗದಲ್ಲಿ ರಶ್ಯನ್ ಸೈನಿಕರ ಶೆಲ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಓರಿಖಿವ್ ಪಟ್ಟಣದಲ್ಲಿ ನಾಗರಿಕರಿಗೆ ಮಾನವೀಯ ನೆರವು ಸಾಮಾಗ್ರಿಗಳ ವಿತರಣಾ ಕೇಂದ್ರವಾಗಿ ಬಳಸಲಾಗುತ್ತಿದ್ದ ಶಾಲಾ ಕಟ್ಟಡವೊಂದರ ಮೇಲೆ ರವಿವಾರ ನಿರ್ದೇಶಿತ ವೈಮಾನಿಕ ಬಾಂಬ್ ಮೂಲಕ ರಶ್ಯದ ವಾಯುಪಡೆ ದಾಳಿ ನಡೆಸಿದೆಯೆಂದು ಉಕ್ರೇನ್ನ ಝಫೋರ್ಝಿಯಾ ಪ್ರಾಂತದ ಗವರ್ನರ್ ಯೂರಿ ಮಾಲಾಶ್ಕೊ ತಿಳಿಸಿದ್ದಾರೆ.
ಬಾಂಬ್ ದಾಳಿಯಲ್ಲಿ ಶಾಲಾ ಕಟ್ಟಡವು ನಾಮಾವಶೇಷವಾಗಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ಕಟ್ಟಡದ ಅವಶೇಷಗಳಡಿಯಿಂದ ಮೂವರ ಶವಗಳನ್ನು ಹೊರತೆಗೆಯಲಾಗಿದೆಯೆಂದು ಉಕ್ರೇನ್ನ ತುರ್ತು ಸೇವೆಗಳ ಕಮಾಂಡರ್ ತಿಳಿಸಿದ್ದಾರೆ.