ಉಕ್ರೇನ್ ಮೇಲೆ ರಶ್ಯದ ತೀವ್ರ ವಾಯುದಾಳಿ | ಡ್ರೋನ್, ಕ್ಷಿಪಣಿಗಳಿಂದ ಆಕ್ರಮಣ
ಕೀವ್ : ಕಳೆದ ನಾಲ್ಕು ದಿನಗಳಲ್ಲಿ ಸತತ ಮೂರನೇ ಬಾರಿಗೆ ಗುರುವಾರ ರಶ್ಯವು ಉಕ್ರೇನ್ ಮೇಲೆ ಭೀಕರ ವೈಮಾನಿಕ ದಾಳಿಯನ್ನು ನಡೆಸಿದೆ. ಕ್ಷಿಪಣಿಗಳು ಹಾಗೂ ಹಲವಾರು ಡ್ರೋನ್‌ಗಳನ್ನು ಬಳಸಿ ರಶ್ಯ ಸೇನೆ ದಾಳಿ ನಡೆಸಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ಉಕ್ರೇನ್ ಮೇಲೆ ಗುರಿಯಿರಿಸಿ ರಶ್ಯ ಪಡೆಗಳು ಐದು ಕ್ಷಿಪಣಿಗಳು ಹಾಗೂ 74 ಶಾಹೀದ್ ಡ್ರೋನ್‌ಗಳನ್ನು ಉಡಾವಣೆಗೊಳಿಸಿತ್ತು. ಆದರೆ ತನ್ನ ವಾಯುರಕ್ಷಣಾ ವ್ಯವಸ್ಥೆಯು ಎರಡು ಕ್ಷಿಪಣಿಗಳನ್ನು ಹಾಗೂ 60 ಡ್ರೋನ್‌ಗಳನ್ನು ತಡೆಗಟ್ಟಿದೆ. ಇತರ 14 ಡ್ರೋನ್‌ಗಳನ್ನು ಅವು ಗುರಿಯನ್ನು ತಲುಪುವ ಮೊದಲೇ ಪತನಗೊಳಿಸಲಾಯಿತೆಂದು ಹೇಳಿಕೆ ತಿಳಿಸಿದೆ.
ನಾಶಪಡಿಸಲಾದ ಡ್ರೋನ್‌ಗಳ ಅವಶೇಷಗಳು ಕೀವ್‌ನಗರದ ಮೂರು ಪ್ರದೇಶಗಳಲ್ಲಿ ಪತನಗೊಂಡಿದ್ದು, ನಾಗರಿಕ ಮೂಲ ಸೌಕರ್ಯಗಳಿಗೆ ಅಲ್ಪಮಟ್ಟದ ಹಾನಿಯುಂಟು ಮಾಡಿದೆ. ಆದರೆ ಯಾವುದೇ ನಾಗರಿಕ ಸಾವುನೋವು ಸಂಭವಿಸಿಲ್ಲ.
ರಶ್ಯದ ಪ್ರದೇಶಗಳ ಮೇಲೆ ಆಕ್ರಮಣ ನಡೆಸುವ ತನ್ನ ಯುದ್ಧತಂತ್ರವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಪುನರುಚ್ಚರಿಸಿದ್ದಾರೆ.
ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ, ರಶ್ಯದ ನೆಲದ ಮೇಲೆ ಆಕ್ರಮಣ ನಡೆಸುವ ವಿಚಾರದಲ್ಲಿ ತನ್ನ ಕೈಗಳನ್ನು ಕಟ್ಟಿಹಾಕಕೂಡದು ಎಂದು ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ರಶ್ಯದ ಭಯೋತ್ಪಾದನೆಗೆ ಎದಿರೇಟು ನೀಡುವ ವಿಷಯದಲ್ಲಿ ಮೈತ್ರಿಕೂಟದ ಎಲ್ಲಾ ಪಾಲುದಾರರು ಹೆಚ್ಚು ಹೆಚ್ಚು ಸಕ್ರಿಯರಾಗಬೇಕೆಂದು ಅವರು ಕರೆ ನೀಡಿದ್ದಾರೆ.
ಕ್ರಿಮಿಯಾದ ಮೇಲೆ ಮಧ್ಯರಾತ್ರಿಯಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಿರುವುದಾಗಿ ರಶ್ಯ ಸೇನೆ ಗುರುವಾರ ತಿಳಿಸಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕಳ್ಳಲಾದ ಕಪ್ಪುಸಮುದ್ರದ ಪರ್ಯಾಯ ದ್ವೀಪವಾದ ಕ್ರಿಮಿಯಾವನ್ನು ಗುರಿಯಿರಿಸಿ ಉಕ್ರೇನ್ ಉಡಾಯಿಸಿದ ‘ಸಾಗರ ಡ್ರೋನ್’ಗಳನ್ನು ತನ್ನ ಪಡೆಗಳು ಧ್ವಂಸಗೊಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.