ಹೌದಿಗಳಿಗೆ ರಶ್ಯದ ಕ್ಷಿಪಣಿ ಪೂರೈಕೆ ; ಒಪ್ಪಂದಕ್ಕೆ ಇರಾನ್ ಮಧ್ಯಸ್ಥಿಕೆ: ವರದಿ

Update: 2024-09-26 14:51 GMT

ಸಾಂದರ್ಭಿಕ ಚಿತ್ರ Photo : NDTV

ಟೆಹ್ರಾನ್ : ಯೆಮನ್‍ನ ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿಗೆ ರಶ್ಯದಿಂದ ಹಡಗು ವಿಧ್ವಂಸಕ ಕ್ಷಿಪಣಿ ಪೂರೈಸುವ ಒಪ್ಪಂದಕ್ಕೆ ಇರಾನ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮುಂದುವರಿದಿದೆ ಎಂದು ಪಾಶ್ಚಿಮಾತ್ಯ ಮತ್ತು ಪ್ರಾದೇಶಿಕ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಯಖೋಂಟ್ ಕ್ಷಿಪಣಿಗೆ ಹೌದಿಗಳು ಬೇಡಿಕೆ ಇರಿಸಿದ್ದು ಇದನ್ನು ಪೂರೈಸುವ ಬಗ್ಗೆ ರಶ್ಯ ಇನ್ನೂ ನಿರ್ಧರಿಸಿಲ್ಲ. ಪಿ-800 ಒನಿಕ್ಸ್ ಎಂದೂ ಕರೆಯಲಾಗುವ ಅತ್ಯಾಧುನಿಕ ಯಖೋಂಟ್ ಕ್ಷಿಪಣಿಯಿಂದ ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ಹೆಚ್ಚು ನಿಖರತೆಯಿಂದ ದಾಳಿ ನಡೆಸಲು ಮತ್ತು ಈ ಹಡಗುಗಳಿಗೆ ಭದ್ರತೆ ಒದಗಿಸಿರುವ ಅಮೆರಿಕ ಮತ್ತು ಯುರೋಪ್‍ನ ಸಮರ ನೌಕೆಗಳಿಗೆ ಬೆದರಿಕೆ ಹೆಚ್ಚಿಸಲು ಹೌದಿಗಳಿಗೆ ಸಾಧ್ಯವಾಗಲಿದೆ. ಯಖೋಂಟ್ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ರಶ್ಯವು ಹೌದಿಗಳಿಗೆ ವರ್ಗಾಯಿಸುವ ಕುರಿತ ಮಾತುಕತೆಗೆ ಇರಾನ್ ಮಧ್ಯಸ್ಥಿಕೆ ವಹಿಸಿದೆ. ಆದರೆ ಈ ಒಪ್ಪಂದದಲ್ಲಿ ತನ್ನ ಪಾತ್ರವನ್ನು ರಹಸ್ಯವಾಗಿಡಲು ಬಯಸಿದೆ ಎಂದು ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಸುಮಾರು 300 ಕಿ.ಮೀ ವ್ಯಾಪ್ತಿ ಹೊಂದಿರುವ ಯಖೋಂಟ್ ಕ್ಷಿಪಣಿಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ವರ್ಷ ಟೆಹ್ರಾನ್‍ನಲ್ಲಿ ರಶ್ಯ ಮತ್ತು ಹೌದಿಗಳ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿದ್ದು ಮುಂದಿನ ವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ರಶ್ಯವು ಇರಾನ್ ಬೆಂಬಲಿತ ಹಿಜ್ಬುಲ್ಲಾಗಳಿಗೆ ಈ ಹಿಂದೆ ಯಖೋಂಟ್ ಕ್ಷಿಪಣಿಗಳನ್ನು ಪೂರೈಸಿದೆ.

ಹೌದಿಗಳಿಗೆ ಕ್ಷಿಪಣಿ ಪೂರೈಸುವ ಬಗ್ಗೆ ರಶ್ಯ ಮಾತುಕತೆ ನಡೆಸುತ್ತಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದು ಇದು ಕಳವಳಕಾರಿ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೌದಿಗಳ ಸಾಮರ್ಥ್ಯವನ್ನು ವೃದ್ಧಿಸುವ ಯಾವುದೇ ಪ್ರಯತ್ನವು ಕೆಂಪು ಸಮುದ್ರ ಹಾಗೂ ವಿಶಾಲ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಜಲಸಂಚಾರ ಸ್ವಾತಂತ್ರ್ಯ ಮತ್ತು ಸ್ಥಿರತೆ ಮೂಡಿಸುವ ಜಾಗತಿಕ ಹಿತಾಸಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News